ನೆರೆ ಸಂತ್ರಸ್ತರ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ಪರಿಹಾರ: ಸಚಿವ ಆರ್.ಅಶೋಕ್

Update: 2019-10-11 16:40 GMT

ಬೆಂಗಳೂರು, ಅ.11: ನೆರೆ ಸಂತ್ರಸ್ತರಿಗೆ ಒದಗಿಸಲಾಗುವ ಪರಿಹಾರದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಕೊಡದಂತೆ, ಅತ್ಯಂತ ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಸಲು ಆರ್‌ಟಿಜಿಎಸ್ ಮೂಲಕ ಅವರ ಖಾತೆಗಳಿಗೆ ಪರಿಹಾರದ ಹಣ ಜಮೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಶುಕ್ರವಾರ ವಿಧಾನಸಭೆಯಲ್ಲಿ ನೆರೆ ಪರಿಸ್ಥಿತಿಗೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, 22 ಜಿಲ್ಲೆಗಳ 103 ತಾಲೂಕಿನ 2798 ಹಳ್ಳಿಗಳು ನೆರೆ ಹಾವಳಿಯಿಂದ ಬಾಧಿತವಾಗಿವೆ. ಈ 22 ಜಿಲ್ಲೆಗಳನ್ನು ಪ್ರವಾಹ ಪೀಡಿತ ಜಿಲ್ಲೆಗಳು ಎಂದು ಸರಕಾರ ಘೋಷಣೆ ಮಾಡಿದೆ ಎಂದರು.

1465 ‘ಕಾಳಜಿ ಕೇಂದ್ರ’ಗಳನ್ನು ತೆರೆದು ಸಂತ್ರಸ್ತರಿಗೆ ಆಶ್ರಯ ಒದಗಿಸಲಾಗಿತ್ತು. 4415 ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿದ್ದು, 10,326 ಆರೋಗ್ಯ ಸಿಬ್ಬಂದಿಗಳು ಈ ಕಾಯಕದಲ್ಲಿ ತೊಡಗಿದ್ದರು. 91 ಮಂದಿ ನೆರೆ ಹಾವಳಿಯಲ್ಲಿ ಮೃತಪಟ್ಟಿದ್ದು, ಮಡಿಕೇರಿಯಲ್ಲಿ ಭೂ ಕುಸಿತದಿಂದ ನಾಲ್ವರು ನಾಪತ್ತೆಯಾಗಿದ್ದಾರೆ. ಮೃತರು ಹಾಗೂ ನಾಪತ್ತೆಯಾಗಿರುವ ಕುಟುಂಬದವರಿಗೆ ತಲಾ 5 ಲಕ್ಷ ರೂ.ಪರಿಹಾರ ಒದಗಿಸಲಾಗಿದೆ ಎಂದು ಅಶೋಕ್ ಹೇಳಿದರು.

3400 ಜಾನುವಾರುಗಳ ಜೀವ ಹಾನಿಯಾಗಿದ್ದು, ಅದರ ಮಾಲಕರಿಗೆ 6.17 ಕೋಟಿ ರೂ.ಪರಿಹಾರ ಒದಗಿಸಲಾಗಿದೆ. ನೆರೆ ಸಂತ್ರಸ್ತರಿಗೆ ಸರಕಾರದ ವತಿಯಿಂದ 2.65 ಲಕ್ಷ ಆಹಾರ ಕಿಟ್(ಅಕ್ಕಿ, ಅಡುಗೆ ಎಣ್ಣೆ, ಉಪ್ಪು, ಸಕ್ಕರೆ ಒಳಗೊಂಡಂತೆ)ಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. ಮನೆಗಳನ್ನು ಕಳೆದುಕೊಂಡಿರುವವರಿಗೆ ಹೊಸ ಮನೆ ನಿರ್ಮಾಣಕ್ಕಾಗಿ ಆರಂಭಿಕವಾಗಿ ಒಂದು ಲಕ್ಷ ರೂ.ಪರಿಹಾರ ನೀಡಲು ಉದ್ದೇಶಿಸಿದ್ದು, ಈ ಪೈಕಿ ಶೇ.50ರಷ್ಟು ಮಂದಿಗೆ ಈಗಾಗಲೇ ಹಣ ಪಾವತಿಯಾಗಿದೆ ಎಂದು ಅವರು ತಿಳಿಸಿದರು.

ನದಿ ಪಾತ್ರದಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದವರಿಗೂ ಪರಿಹಾರ ನೀಡುತ್ತಿದ್ದೇವೆ. ಮನೆ ಕಳೆದುಕೊಂಡಿರುವವ ಸಂತ್ರಸ್ತರಿಗೆ 30/40 ವಿಸ್ತೀರ್ಣದ ನಿವೇಶನ ಕೊಡುತ್ತೇವೆ. ಚಿಕ್ಕಮಗಳೂರಿನಲ್ಲಿ ಭೂ ಕುಸಿತವಾಗುವ ಸ್ಥಳವನ್ನು ಸರಕಾರ ವಶಕ್ಕೆ ಪಡೆದುಕೊಂಡು, ಬದಲಿ ಜಾಗ ನೀಡಲು 380 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದು ಅಶೋಕ್ ಹೇಳಿದರು.

ರಾಜ್ಯ ಹಾಗೂ ಜಿಲ್ಲಾ ರಸ್ತೆಗಳು 4119 ಕಿ.ಮೀ, ಗ್ರಾಮೀಣ ರಸ್ತೆ 14,921 ಕಿ.ಮೀ, ನಗರ ಪ್ರದೇಶದ ರಸ್ತೆ 2778 ಕಿ.ಮೀ, 2913 ಸೇತುವೆಗಳು, 11,063 ಸರಕಾರಿ ಕಟ್ಟಡಗಳು ಹಾಗೂ ಸಣ್ಣ ನೀರಾವರಿ ಇಲಾಖೆಯ 1500 ಕೆರೆಗಳಿಗೆ ಹಾನಿಯಾಗಿದೆ ಎಂದು ಅವರು ವಿವರಣೆ ನೀಡಿದರು.

ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗದಿಂದ 417.93 ಕೋಟಿ ರೂ. ಹಾಗೂ ಮೂಲಭೂತ ಸೌಕರ್ಯಕ್ಕಾಗಿ 500 ಕೋಟಿ ರೂ., ವಸತಿ ಇಲಾಖೆಯಿಂದ ಮನೆಗಳ ನಿರ್ಮಾಣಕ್ಕಾಗಿ 1000 ಕೋಟಿ ರೂ., ಮನೆಗಳ ದುರಸ್ತಿಗಾಗಿ 231 ಕೋಟಿ ರೂ., ಲೋಕೋಪಯೋಗಿ ಇಲಾಖೆಯಿಂದ ರಸ್ತೆಗಳ ದುರಸ್ತಿಗಾಗಿ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅಶೋಕ್ ಹೇಳಿದರು.

 ನೆರೆ ಪರಿಸ್ಥಿತಿಯಿಂದಾಗಿ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಕಳೆದುಕೊಂಡಿದ್ದರೆ, ಹೊಸದಾಗಿ ಆ ದಾಖಲೆಗಳನ್ನು ಒದಗಿಸಲು ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 49 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದ್ದು, 2-3 ದಿನಗಳಲ್ಲಿ ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರದಿಂದ 1200 ಕೋಟಿ ರೂ.ಬಂದಿದೆ. 1035 ಕೋಟಿ ರೂ.ಗಳನ್ನು ಬೆಳೆ ಪರಿಹಾರಕ್ಕೆ ಒದಗಿಸಲಾಗುವುದು. ಅದನ್ನು ಆರ್‌ಟಿಜಿಎಸ್ ಮೂಲಕ ರೈತರ ಖಾತೆಗಳಿಗೆ ಜವೆು ಮಾಡಲಾಗುವುದು. 2018ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ 1029.39 ಕೋಟಿ ರೂ.ಇನ್‌ಪುಟ್ ಸಬ್ಸಿಡಿ ಬಂದಿದೆ. 4.51 ಲಕ್ಷ ರೈತರಿಗೆ 246 ಕೋಟಿ ರೂ.ಗಳನ್ನು ಈವರೆಗೆ ರೈತರಿಗೆ ನೀಡಲಾಗಿದೆ ಎಂದು ಅಶೋಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News