×
Ad

ಮಾತೃ ಹೃದಯದಿಂದ ಸಂತ್ರಸ್ತರಿಗೆ ಸೂಕ್ತ ನೆರವು ಒದಿಗಿಸಿ: ಸರಕಾರಕ್ಕೆ ಸಿದ್ದರಾಮಯ್ಯ ಒತ್ತಾಯ

Update: 2019-10-11 22:01 IST

ಬೆಂಗಳೂರು, ಅ. 11: ಪ್ರವಾಹ ಬಂದು 70 ದಿನ ಕಳೆದರೂ ಸರಕಾರ ಈವರೆಗೂ ಬೆಳೆ ಪರಿಹಾರ ನೀಡಿಲ್ಲ. ನೀರಾವರಿಗೆ ಪ್ರತಿ ಹೆಕ್ಟೆರ್‌ಗೆ 1 ಲಕ್ಷ ರೂ., ಒಣಭೂಮಿ ಪ್ರತಿ ಹೆಕ್ಟೆರ್‌ಗೆ 50 ಲಕ್ಷ ರೂ.ನಂತೆ ಬೆಳೆ ಪರಿಹಾರ ನೀಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಪ್ರವಾಹ ಪರಿಸ್ಥಿತಿ ಬಗ್ಗೆ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯ ಸರಕಾರ ಈ ವರೆಗೂ 10 ಸಾವಿರ ರೂ.ಗಳನ್ನು ನೀಡಿದ್ದು ಬಿಟ್ಟರೆ ಸಂತ್ರಸ್ತರಿಗೆ ಯಾವುದೇ ಪರಿಹಾರವನ್ನು ಕಲ್ಪಿಸಲು ಮುಂದಾಗಿಲ್ಲ. ಜನತೆ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ಕೊಡುತ್ತಿರುವುದನ್ನು ಕನಿಷ್ಠ 25 ಸಾವಿರ ರೂ.ಗೆ ಹೆಚ್ಚಿಸಬೇಕು. ನಿರ್ಮಾಣಕ್ಕೆ 5 ಲಕ್ಷ ರೂ.ಸಾಲುವುದಿಲ್ಲ. ಅದಕ್ಕೂ 10 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. ಸರಕಾರದ ಅಂದಾಜಿಸಿದಂತೆ 35 ಸಾವಿರ ಕೋಟಿ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಆದರೆ, ಕೇಂದ್ರ ಸರಕಾರ ಕೇವಲ 1,200 ಕೋಟಿ ರೂ.ಗಳನ್ನಷ್ಟೇ ನೀಡಿದೆ.

ಕೇಂದ್ರದಿಂದ ಇನ್ನೂ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಬೇಕು. 25 ಸಂಸದರಿದ್ದು, ಅವರೆಲ್ಲರೂ ನೆರೆ ಪರಿಹಾರಕ್ಕೆ ಆಗ್ರಹಿಸಬೇಕು. ಹದಗೆಟ್ಟ ರಸ್ತೆಗಳ ಪುನರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಪ್ರವಾಹದಿಂದ ಸಾವಿರಕ್ಕೂ ಅಧಿಕ ಹಳ್ಳಿಗಳು ಸಂಪೂರ್ಣ ನಾಶವಾಗಿದ್ದು, ಕೂಡಲೇ ಆ ಹಳ್ಳಿಗಳನ್ನು ಎತ್ತರ ಪ್ರದೇಶಕ್ಕೆ ಸ್ಥಳಾಂತರಿಸಿ ಅಗತ್ಯ ಪುನರ್ವಸತಿ ಕಲ್ಪಿಸಬೇಕು.

ಶಾಲಾ ಮಕ್ಕಳಿಗೆ ಇನ್ನೂ ಪಠ್ಯ-ಪುಸ್ತಕಗಳನ್ನು ನೀಡಿಲ್ಲ. ಹೀಗಾಗಿ ತಕ್ಷಣವೇ ಎಲ್ಲ ಮಕ್ಕಳಿಗೆ ಪಠ್ಯ-ಪುಸ್ತಕಗಳನ್ನು ಒದಗಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಕನಿಷ್ಠ ಮಾನವೀಯತೆ, ಮಾತೃ ಹೃದಯದಿಂದ ಸರಕಾರ ಸಂತ್ರಸ್ತರಿಗೆ ಸೂಕ್ತ ನೆರವು ಒದಗಿಸಬೇಕು ಎಂದು ಆಗ್ರಹಿಸಿದರು.

ನೆರೆ-ಬರ ಪರಿಹಾರ ಕಲ್ಪಿಸಲು ರೂಪಿಸಿರುವ ಎನ್‌ಡಿಆರ್‌ಎಫ್ ಮಾನದಂಡ ಮತ್ತು ನಿಯಮಾವಳಿಗಳನ್ನು ಸರಳೀಕರಿಸಬೇಕು. ಕೇಂದ್ರದ ಪರಿಹಾರದ ಜೊತೆಗೆ ರಾಜ್ಯ ಸರಕಾರಸ ತನ್ನ ಖಜಾನೆಯಿಂದಲೇ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಸಿದ್ದರಾಮಯ್ಯ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News