ನೆರೆ ಸಂತ್ರಸ್ತರಿಗೆ ಶಕ್ತಿ ಮೀರಿ ನೆರವು ನೀಡಲು ಸರಕಾರ ಬದ್ಧ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-10-11 16:45 GMT

ಬೆಂಗಳೂರು, ಅ.11: ರಾಜ್ಯ ಸರಕಾರವು ನೆರೆ ಸಂತ್ರಸ್ತರಿಗೆ ಶಕ್ತಿ ಮೀರಿ ನೆರವು ನೀಡಲು ಬದ್ಧವಾಗಿದ್ದು, ಯಾವುದೇ ರೀತಿಯಲ್ಲಿ ಕೊರತೆ ಎದುರಾಗದಂತೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಶುಕ್ರವಾರ ವಿಧಾನಸಭೆಯಲ್ಲಿ ನೆರೆ ಪರಿಸ್ಥಿತಿಗೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಆಗಸ್ಟ್ 3 ರಿಂದ 10ರ ನಡುವೆ 224 ಮಿ.ಮೀ. ಮಳೆಯಾಗಿದೆ. ಇದು ವಾಡಿಕೆಗಿಂತ ಶೇ.279ರಷ್ಟು ಹೆಚ್ಚು ಪ್ರಮಾಣದಾಗಿದೆ. ಕೃಷ್ಣಾ ನದಿಯಿಂದ 6ಲಕ್ಷ ಕ್ಯೂಸೆಕ್ಸ್, ಘಟಪ್ರಭಾ ನದಿಯಿಂದ 2 ಲಕ್ಷ ಕ್ಯೂಸೆಕ್ಸ್, ಮಲಪ್ರಭ ನದಿಯಿಂದ 1 ಲಕ್ಷ ಕ್ಯೂಸೆಕ್ಸ್, ಆಲಮಟ್ಟಿ ಜಲಾಶಯದಿಂದ 1.85 ಲಕ್ಷ ಕ್ಯೂಸೆಕ್ಸ್ ನೀರು ಹರಿದಿದೆ ಎಂದರು.

ರಾಜ್ಯದ ಕೈಗಾರಿಕೋದ್ಯಮಿಗಳು, ಶಿಕ್ಷಣ ಸಂಸ್ಥೆಗಳು, ದಾನಿಗಳಿಂದ ಮುಖ್ಯಮಂತ್ರಿಯ ಪರಿಹಾರ ನಿಧಿಗೆ 300 ಕೋಟಿ ರು.ಗಳಷ್ಟು ನೆರವು ಬಂದಿದೆ. ಕೇಂದ್ರ ಗೃಹ ಸಚಿವರು ಹಾಗೂ ಹಣಕಾಸು ಸಚಿವರು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ನಾನು ಒಂದು ವಾರಗಳ ಕಾಲ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿ ಪರಿಹಾರ ಕಾರ್ಯಗಳನ್ನು ನಿರ್ವಹಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ನೆರೆ ಹಾವಳಿಯಿಂದಾಗಿ ಸಂಪೂರ್ಣ ಹಾಗೂ ಭಾಗಶಃ ಹಾನಿಯಾಗಿರುವ ಎ ಮತ್ತು ಬಿ ಕ್ಯಾಟೆಗರಿಯ 42,893 ಮನೆಗಳಿಗೆ ತಲಾ 5 ಲಕ್ಷ ರೂ.ಪರಿಹಾರ, ಸಿ ಕ್ಯಾಟೆಗರಿಯ 77,513 ಮನೆಗಳಿಗೆ ತಲಾ 50 ಸಾವಿರ ರೂ.ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಮುಳುಗಡೆಯಾಗಿರುವ ಗ್ರಾಮಗಳ ಸ್ಥಳಾಂತರಕ್ಕೆ ಅಲ್ಲಿನ ಜನ ಬಯಸಿದರೆ, ಎತ್ತರದ ಪ್ರದೇಶದಲ್ಲಿ ಅವರಿಗೆ ಮನೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸ್ಥಳಾಂತರಿಸಲು ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

7.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ಖುಷ್ಕಿ ಜಮೀನು ಪ್ರತಿ ಹೆಕ್ಟೇರ್‌ಗೆ 6800 ರೂ.ಪರಿಹಾರ ನೀಡಲು ಅವಕಾಶವಿದೆ. ರಾಜ್ಯ ಸರಕಾರದಿಂದ 10 ಸಾವಿರ ರೂ.ಗಳನ್ನು ಸೇರಿಸಿ 16,800 ರೂ., ತೋಟಗಾರಿಕೆ ಬೆಳೆಗಳಿಗೆ 13,500 ರೂ.ಗಳಿಗೆ 10 ಸಾವಿರ ರೂ.ಸೇರಿಸಿ 23,500 ರೂ., ನೀರಾವರಿ ಬೆಳೆಗಳಿಗೆ 18 ಸಾವಿರ ರೂ.ಗಳಿಗೆ 10 ಸಾವಿರ ರೂ.ಸೇರಿಸಿ 28 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯ ಸರಕಾರದಿಂದ ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ಈವರೆಗೆ 2950 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ಬಜೆಟ್‌ನಲ್ಲಿ ಇನ್ನು ಹೆಚ್ಚಿನ ಹಣಕಾಸಿನ ನೆರವು ಒದಗಿಸಲಾಗುವುದು. ನಗರ ಪ್ರದೇಶಗಳಲ್ಲಿನ ಅಂಗಡಿಗಳಿಗೆ ಹಾನಿಯಾಗಿದ್ದರೆ 25 ಸಾವಿರ ರೂ., ನೇಕಾರರ ಮಗ್ಗಗಳ ದುರಸ್ಥಿಗೆ 25 ಸಾವಿರ ರೂ.ಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಮನೆಗಳನ್ನು ಕಳೆದುಕೊಂಡಿರುವ ಕೂಡು ಕುಟುಂಬಗಳಿದ್ದರೆ, ಪ್ರತ್ಯೇಕವಾಗಿ ಆಯಾ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಎಲ್ಲ ವಸತಿ ಯೋಜನೆಗಳನ್ನು ವರ್ಗಾಯಿಸಿ ಮನೆಗಳ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಲಾಗುವುದು ಎಂದು ಅವರು ಹೇಳಿದರು.

ಪ್ರವಾಹ ಬಂದ ಮೂರು ದಿನಗಳಲ್ಲಿ ಕಾಳಜಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದ್ದ 2.03 ಲಕ್ಷ ಕುಟುಂಬಗಳಿಗೆ ತಲಾ 10 ಸಾವಿರ ರೂ.ಗಳಂತೆ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಯಾರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿಲ್ಲವೋ, ಅವರು ಮುಂದೆ ಬಂದರೆ ಅವರಿಗೂ ಪರಿಹಾರ ನೀಡಲಾಗುವುದು. ರಸ್ತೆಗಳ ದುರಸ್ತಿಗಾಗಿ 8 ಸಾವಿರ ಕೋಟಿ ರೂ.ಗಳ ಅಗತ್ಯವಿದೆ ಎಂದು ಯಡಿಯೂರಪ್ಪ ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, 2014-15ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಆಳಿಕಲ್ಲು ಮಳೆಯಾಗಿ ಭತ್ತದ ಬೆಳೆ ನಾಶವಾದಾಗ ಪ್ರತಿ ಹೆಕ್ಟೇರ್‌ಗೆ ತಲಾ 25 ಸಾವಿರ ರೂ.ಗಳಂತೆ ನಾನು ಪರಿಹಾರ ಒದಗಿಸಿದ್ದೇನೆ. ಒಂದು ಎಕರೆಯಲ್ಲಿ ಕಬ್ಬು ಬೆಳೆಯಲು ಕನಿಷ್ಠ 40 ಸಾವಿರ ರೂ.ಬೇಕು. ಆದುದರಿಂದ, ಸರಕಾರ ಒಂದು ಹೆಕ್ಟೇರ್ ಪ್ರದೇಶಕ್ಕೆ ಕನಿಷ್ಠ 1 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News