ಉನ್ನತ ವೈದ್ಯಕೀಯ ಶಿಕ್ಷಣಕ್ಕಾಗಿ ಇಂಗ್ಲೆಂಡ್ ಹೆಲ್ತ್ ಎಜುಕೇಷನ್ ಜೊತೆ ಒಪ್ಪಂದ: ಡಿಸಿಎಂ ಅಶ್ವಥ್ ನಾರಾಯಣ
ಬೆಂಗಳೂರು, ಅ.11: ಯುಜಿ ಮತ್ತು ಪಿಜಿ ಸಂಬಂಧ ಇಂಗ್ಲೆಂಡ್‌ನಲ್ಲಿ ಯಾವ ರೀತಿಯ ವೈದ್ಯಕೀಯ ಶಿಕ್ಷಣವಿದೆ ಎಂಬುದನ್ನು ತಿಳಿಯಲು ಹಾಗೂ ಉನ್ನತ ಶಿಕ್ಷಣ ಪಡೆಯಲು ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು.
ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ಒಪ್ಪಂದಕ್ಕೆ ಸಹಿ ಮಾಡಿದ ಬಳಿಕ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಪಡೆಯುವ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಹೆಚ್ಚಿನ ವ್ಯಾಸಂಗ ಕಲ್ಪಿಸುವುದಕ್ಕಾಗಿ ಇಂಗ್ಲೆಂಡಿನ ಹೆಲ್ತ್ ಎಜುಕೇಷನ್ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು ಎಂದರು.
ನರ್ಸಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಬೋಧಿಸುವ ಪ್ರಾಧ್ಯಾಪಕರು ಸಹ ಹೆಚ್ಚಿನ ವ್ಯಾಸಂಗದಲ್ಲಿ ತೊಡಗಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ಅವರು ತಿಳಿಸಿದರು.
ಆರ್‌ಜಿಯುಎಚ್‌ಎಸ್ ಕುಲಪತಿ ಡಾ.ಎಸ್.ಸಚ್ಚಿದಾನಂದ ಮಾತನಾಡಿ, ಈ ಒಪ್ಪಂದದ ಮೂಲಕ ನರ್ಸಿಂಗ್, ತುರ್ತು ಚಿಕಿತ್ಸಾ ಘಟಕದಲ್ಲಿನ ಔಷಧಗಳ ಕುರಿತ ಅಧ್ಯಯನ, ಚರ್ಮರೋಗದ ಅಧ್ಯಯನ ಕೈಗೊಳ್ಳಲು ಸಹಾಯವಾಗಲಿದೆ. ಅಷ್ಟೇ ಅಲ್ಲದೆ, ಎರಡೂ ವಿಶ್ವವಿದ್ಯಾಲಯಗಳಲ್ಲಿರುವ ಜ್ಞಾನ, ಅಧ್ಯಯನ ಮತ್ತು ಕೌಶಲ್ಯಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಜಪಾನ್, ನಾಗಸಾಕಿ ಸೇರಿದಂತೆ ಜಗತ್ತಿನ ವಿವಿಧ ದೇಶಗಳ ವಿಶ್ವವಿದ್ಯಾಲಯಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಇಂಗ್ಲೆಂಡಿನ ಹೆಲ್ತ್ ಎಜುಕೇಷನ್‌ನ ಅಯಾನ್ ಕಮ್ಮಿಂಗ್, ಕುಲಸಚಿವ ಶಿವಾನಂದ ಕಪಾಶಿ ಹಾಗೂ ವೌಲ್ಯಮಾಪನ ಕುಲಸಚಿವ ಡಾ.ಕೆ.ಬಿ.ಲಿಂಗೇಗೌಡ ಉಪಸ್ಥಿತರಿದ್ದರು.