ಪ್ರತ್ಯೇಕ ವಿಪತ್ತು ನಿರ್ವಹಣಾ ಇಲಾಖೆ ರಚನೆಗೆ ಯು.ಟಿ.ಖಾದರ್ ಆಗ್ರಹ

Update: 2019-10-11 18:13 GMT

ಬೆಂಗಳೂರು, ಅ.11: ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪದೇ ಪದೇ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ರಾಜ್ಯದಲ್ಲಿ ಪ್ರತ್ಯೇಕವಾಗಿ ವಿಪತ್ತು ನಿರ್ವಹಣಾ ಇಲಾಖೆಯನ್ನು ರಚಿಸುವುದು ಸೂಕ್ತ ಎಂದು ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶುಕ್ರವಾರ ವಿಧಾನಸಭೆಯಲ್ಲಿ ನೆರೆ ಹಾವಳಿ ವಿಚಾರದ ಕುರಿತು ಮಾತನಾಡಿದ ಅವರು, ಪ್ರತ್ಯೇಕ ವಿಪತ್ತು ನಿರ್ವಹಣಾ ಇಲಾಖೆ ರಚನೆ ಮಾಡಿ, ಎಲ್ಲ ಇಲಾಖೆಗಳಿಂದ ಶೇ.10ರಷ್ಟು ಅನುದಾನವನ್ನು ಈ ಇಲಾಖೆಗೆ ಒದಗಿಸಿದರೆ, ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಎದುರಾದಾಗ ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭೂ ಕುಸಿತ ಸಾಮಾನ್ಯವಾಗಿದೆ. ಇದಕ್ಕೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ವಿಶೇಷ ತಂಡವನ್ನು ರಚನೆ ಮಾಡಿ, ಸಮೀಕ್ಷೆ ನಡೆಸಬೇಕು. ಭೂ ಕುಸಿತವಾಗ ಸ್ಥಳವನ್ನು ಸರಕಾರದ ವಶಕ್ಕೆ ಪಡೆದುಕೊಂಡು ರೈತರಿಗೆ ಪರ್ಯಾಯ ಸುರಕ್ಷಿತ ಭೂಮಿಯನ್ನು ಒದಗಿಸಬೇಕು ಎಂದು ಖಾದರ್ ಸಲಹೆ ನೀಡಿದರು.

‘ಸಂಸದರಿಂದ ಪ್ರಧಾನಿಯಲ್ಲ, ಪ್ರಧಾನಿಯಿಂದ ಸಂಸದರು’ ಎಂಬ ಮನೋಭಾವನೆ ಬೆಳೆಸಿಕೊಂಡಿರುವುದರಿಂದ ನಮ್ಮ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 25 ಮಂದಿ ಸಂಸದರಿಗೆ ಪ್ರಧಾನಮಂತ್ರಿ ಬಳಿ ರಾಜ್ಯದ ಪರವಾಗಿ ಮಾತನಾಡಲು ಧೈರ್ಯ ವಿಲ್ಲದಂತಾಗಿದೆ. ಆದುದರಿಂದ, ರಾಜ್ಯ ಸರಕಾರ ಸರ್ವ ಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗಲಿ ಎಂದು ಅವರು ಆಗ್ರಹಿಸಿದರು.

ಬೆಳ್ತಂಗಡಿ, ಮಂಗಳೂರು, ಉಳ್ಳಾಲ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿಯೂ ನೆರೆ ಹಾವಳಿಯಿಂದ ಸಾಕಷ್ಟು ಹಾನಿಯಾಗಿದೆ. ಪಚ್ಚನಾಡಿ ಬಳಿಯ ಮಂದಾರ ಗ್ರಾಮದಲ್ಲಿ ಸುಮಾರು 1 ಕಿ.ಮೀ.ನಷ್ಟು ವಿಸ್ತೀರ್ಣದಲ್ಲಿ ಕಸ ಸಂಗ್ರಹವಾಗಿದೆ. ಇಲ್ಲಿಂದ ತಜ್ಞರ ತಂಡವನ್ನು ಕರೆದುಕೊಂಡು ಹೋಗಿ ಆ ಪ್ರದೇಶದಲ್ಲಿ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ, ಭವಿಷ್ಯದಲ್ಲಿ ಇದು ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಖಾದರ್ ಆತಂಕ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News