ಗಾಂಧೀಜಿಯ ರಾಷ್ಟ್ರಪಿತನ ಪಟ್ಟ ಕಸಿಯಲು ಹುನ್ನಾರ

Update: 2019-10-12 05:02 GMT

ಎರಡು ವಾರಗಳ ಹಿಂದೆ, ವಿಶ್ವದ ಅತ್ಯಂತ ನೈತಿಕವಾಗಿ ವಿರೂಪಗೊಂಡ ರಾಜಕಾರಣಿಯೊಬ್ಬರು ಹೊಸ ರಾಷ್ಟ್ರಪಿತರೊಬ್ಬರನ್ನು ಅಭಿಷಿಕ್ತಗೊಳಿಸಿದರು. ಇದು ಭಾರತಕ್ಕೆ ಆಗಿರುವ ಅತ್ಯಂತ ಘೋರ ಅಪಮಾನವಾಗಿದೆ. ರಿಯಲ್ ಎಸ್ಟೇಟ್ ದೊರೆಯಾಗಿ, ಆನಂತರ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೇರಿದವರು ನಮ್ಮ ರಾಷ್ಟ್ರೀಯ ಮಹನೀಯರ ಸ್ಥಾನಮಾನಗಳನ್ನು ಪುನರ್‌ರೂಪಿಸುತ್ತಿದ್ದಾರೆ. ಆದಾಗ್ಯೂ ನಮ್ಮ ರಾಜಕೀಯ ಸಂಸ್ಥಾಪನೆ ಹಾಗೂ ರಾಷ್ಟ್ರೀಯವಾದಿ ಸಂವೇದನೆಗಳನ್ನು ತಮ್ಮ ಎರಡೂ ತೋಳುಗಳಲ್ಲಿ ಧರಿಸಿರುವಂತಹ ಅತಿಕ್ರಮಣಕಾರಿ ಮತ್ತು ಗದ್ದಲವೆಬ್ಬಿಸುವ ಭಟ್ಟಂಗಿಗಳು 20ನೇ ಶತಮಾನದ ಅತಿ ದೊಡ್ಡ ನೈತಿಕ ಧ್ವನಿಯೆನಿಸಿರುವ ಮಹಾತ್ಮ್ಮಾಗಾಂಧಿಯವರಿಗೆ ಆದ ಅವಮಾನಕ್ಕೆ ತುಟಿಪಿಟಿಕ್ ಎನ್ನಲಿಲ್ಲ.

 ಇದಕ್ಕಿಂತಲೂ ಭಯಾನಕವೆಂಬಂತೆ, ಪ್ರಧಾನಿ ನರೇಂದ್ರ ಮೋದಿಯವರು ಅಹ್ಮದಾಬಾದ್‌ನಲ್ಲಿ ನಿಜವಾದ ರಾಷ್ಟ್ರಪಿತನ 150ನೇ ಜನ್ಮದಿನಾಚರಣೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಕೆಲವೇ ದಿನಗಳ ಮೊದಲು ಶ್ವೇತಭವನದಲ್ಲಿ ನೆಲೆಸಿರುವ ವಿಡಂಬನಾತ್ಮಕ ವ್ಯಕ್ತಿಯು ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.

ಒಂದು ವೇಳೆ ಹೊಸ ರಾಷ್ಟ್ರಪಿತನನ್ನು ಒಪ್ಪುವುದಾದರೆ, ಆಗ ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ. ಹಳೆಯ ಸಬರಮತಿ ಸಂತನನ್ನು ನಾವು ಏನೆಂದು ಪರಿಗಣಿಸಬೇಕು. ನಮ್ಮ ರಾಷ್ಟ್ರೀಯ ನೇತಾರರ ಸಾಲಿನಿಂದ ಬಾಪೂಜಿಯವರನ್ನು ನಿಷೇಧಿಸಲು ಮುಂದಿನ ದಿನಗಳಲ್ಲಿ ಕೆಲವು ಪ್ರಬಲವಾದ ವಾದವನ್ನು ಮಂಡಿಸುವ ಸಂಭವವೂ ಇರಬಹುದು. ಹೀಗೆ ನಿಜವಾದ ರಾಷ್ಟ್ರಪಿತನ ಉನ್ನತವಾದ ಆಧ್ಯಾತ್ಮಿಕ ಸ್ಥಾನಮಾನವನ್ನು ಕಸಿಯಲ್ಪಡುವ ಸಾಧ್ಯತೆಗಳು ಇವೆ.

ಹಿಂದೂ ಮಹಾಸಭಾದ ಮಂದಿಗೆ ಮಹಾತ್ಮಾ ಗಾಂಧೀಜಿಯವರು ಕಣ್ಣುನೋವಾಗಿದ್ದರು. 1948ರ ಜನವರಿ 30ರಂದು ನಡೆದ ಮಹಾತ್ಮಾ ಗಾಂಧೀಜಿಯವರ ಹತ್ಯೆ ಪ್ರಕರಣವನ್ನು ಅವರ ಮೇಲೆ ಗುಂಡುಗಳನ್ನೆಸೆದ ನಾಥೂರಾಮ್ ಗೋಡ್ಸೆಯಿಂದಾಚೆಗೂ ನೋಡುವ ಅಗತ್ಯವಿದೆ. ಮಹಾತ್ಮಾಗಾಂಧೀಜಿಯವರ 150ನೇ ಜನ್ಮದಿನಾಚರಣೆಯನ್ನು ವರ್ಷವಿಡೀ ಆಚರಿಸಲು ಆರಂಭಿಸಿರುವಂತೆಯೇ ಈ ಬಡಕಲು ವೃದ್ಧನನ್ನು ದೈಹಿಕವಾಗಿ ನಿರ್ಮೂಲಗೊಳಿಸಲು ಕೆಲವೊಂದು ನಿರ್ದಿಷ್ಟ ಶಕ್ತಿಗಳು ಹಾಗೂ ಧ್ವನಿಗಳು ಯಾಕೆ ಅಷ್ಟೊಂದು ಹತಾಶವಾಗಿದ್ದವೆಂದು ನಮಗೆ ನಾವೇ ಜ್ಞಾಪಿಸಿಕೊಳ್ಳಬೇಕಾದ ಅಗತ್ಯವಿದೆ. ಗಾಂಧೀಜಿಯವರನ್ನು ಸಾರ್ವಜನಿಕವಾಗಿ ಹತ್ಯೆಗೈದ ಕೃತ್ಯವನ್ನು ಯಾಕೆ ಕಾರ್ಯಗತಗೊಳಿಸಲಾಯಿತು. ಈಗ ಹಾಲಿ ಆಡಳಿತರೂಢ ಪಕ್ಷದ ಅತ್ಯಂತ ಗೌರವಾನ್ವಿತ ಹಾಗೂ ವೌಲ್ಯಯುತವಾದ ಸದಸ್ಯನಾಗಿರುವ ಎಂ.ಜೆ. ಅಕ್ಬರ್ ತಾನು 1985ರಲ್ಲಿ ಬರೆದಿದ್ದ ‘ಇಂಡಿಯಾ: ದಿ ಸೀಝ್ ವಿದಿನ್’ ಕೃತಿಯಲ್ಲಿ ಹೀಗೆ ಉಲ್ಲೇಖಿಸಿದ್ದರು. ‘‘ಆರೆಸ್ಸೆಸ್ ಸ್ವಾತಂತ್ರ ಸಂಗ್ರಾಮದಿಂದ ದೂರವುಳಿದುಕೊಂಡಿದ್ದುದು ಯಾಕೆಂದರೆ ಆ ಹೋರಾಟವನ್ನು ಮುನ್ನಡೆಸುತ್ತಿದ್ದ ವ್ಯಕ್ತಿಯ ಬಗ್ಗೆ ಅದಕ್ಕೆ ಕೇವಲ ತಿರಸ್ಕಾರ ಹಾಗೂ ದ್ವೇಷ ಮಾತ್ರವೇ ಇತ್ತು’’ ಅವರು ಮುಂದುವರಿದು ಹೀಗೆ ಹೇಳು ತ್ತಾರೆ. ‘‘ಆರೆಸ್ಸೆಸ್ 1948ರಲ್ಲಿ ಹಿನ್ನಡೆಯನ್ನು ಅನುಭವಿಸಿತ್ತು. ಮಹಾತ್ಮಾ ಗಾಂಧಿಯವರ ಹತ್ಯೆಗೆ ಅದು ಪ್ರೇರಕವಾಗಿತ್ತೆಂಬುದನ್ನು ಕಡೆಗಣಿಸಲು ಸರ್ದಾರ್ ವಲ್ಲಭಬಾಯ್ ಪಟೇಲ್ ಅವರಿಗೂ ಸಾಧ್ಯವಾಗಲಿಲ್ಲ. ಹೀಗಾಗಿ ಗೃಹ ಸಚಿವರಾಗಿದ್ದ ಪಟೇಲ್, ಆರೆಸ್ಸೆಸನ್ನು ನಿಷೇಧಿಸಿದ್ದರು’’ ಎಂದು ಅಕ್ಬರ್ ಹೇಳಿದ್ದರು.

 ಮಹಾತ್ಮಾ ಗಾಂಧಿಯವರಿಗೆ ಆರೆಸ್ಸೆಸ್ ಸ್ವಯಂಸೇವಕರ ಒಡನಾಟವಿತ್ತೆಂಬು ದನ್ನು ಬಿಂಬಿಸುವ ನಾಗಪುರದ ವರಿಷ್ಠರ ಹಾಲಿ ಪ್ರಯತ್ನಗಳೇನೇ ಇರಲಿ, ಆ ಕುರಿತ ಸಮಕಾಲೀನ ದಾಖಲೆಗಳು ವಿಭಿನ್ನವಾದ ಕಥೆಯನ್ನೇ ಹೇಳುತ್ತವೆ. ಜೋಸೆಫ್ ಲೆಲಿವೇಲ್ಡ್ ಅವರ ‘ಗ್ರೇಟ್ ಔಲ್- ಮಹಾತ್ಮಾಗಾಂಧಿ ಆ್ಯಂಡ್ ಹಿಸ್ ಸ್ಟ್ರಗಲ್ ವಿದ್ ಇಂಡಿಯಾ’ ಲೇಖನದಲ್ಲಿ ಹೀಗೆ ಉಲ್ಲೇಖಿಸಲಾಗಿದೆ.

 ‘‘ಪ್ರಾರ್ಥನಾ ಸಭೆಯೊಂದರ ಬಳಿಕ ಆರೆಸ್ಸೆಸ್ ಕಾರ್ಯಕರ್ತರೊಂದಿಗೆ ಅವರ ಸಂವಾದ ಕಾರ್ಯಕ್ರಮವಿತ್ತು. ಆದರೆ ಕೆಲವು ಸಂಘಪರಿವಾರದ ದಾಂಧಲೆಕೋರರು ಪ್ರಾರ್ಥನಾ ಸಭೆ ನಡೆಯಲು ಸಾಧ್ಯವಿಲ್ಲದಂತೆ ಮಾಡಿದರು. ಗಾಂಧೀಜಿಯವರ ಪ್ರಾರ್ಥನಾ ಸಭೆಯಲ್ಲಿ ಕುರ್‌ಆನ್‌ನ ಸೂಕ್ತಿಯೊಂದನ್ನು ಪಠಿಸುವ ಪ್ರಯತ್ನ ನಡೆಸಿದಾಗ, ಅಡ್ಡಿಪಡಿಸಿದ ದಾಂಧಲೆ ನಿರತರು ಗಾಂಧಿ ಮುರ್ದಾಬಾದ್, ಗಾಂಧಿ ಸಾಯಬೇಕು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಓರ್ವ ಗಾಂಧೀಜಿಯನ್ನು ಕೊಲ್ಲಲು ಸಾಧ್ಯವಾಗಿತ್ತು. ಆದರೆ ಅವರಲ್ಲಿನ ಮಹಾತ್ಮಾ ಈಗಲೂ ಜೀವಂತವಿದ್ದಾನೆ. ಮಹಾತ್ಮಾ ಬದುಕುಳಿದಿರುವುದು ಮಾತ್ರವಲ್ಲ, ನಮ್ಮ ಸಾರ್ವಜನಿಕ ಬದುಕಿನ ನೈತಿಕ ಧ್ವನಿಯು ಅತ್ಯಂತ ಅನಿವಾರ್ಯವಾಗಿದೆಯೆಂಬುದನ್ನು ನಿರಂತರವಾಗಿ ನಮಗೆ ನೆನಪಿಸುತ್ತಾ ಬರುತ್ತಿದ್ದಾರೆ. ಅವರ ನಮ್ಮ ರಾಜಕೀಯ ಚಿಂತನೆ ಹಾಗೂ ನಡವಳಿಕೆಯಲ್ಲಿ ನೈತಿಕತೆಗಳನ್ನು ಬೆರೆಸುವ ಅವರ ಹಠವಾದಿತನವು ನಮ್ಮ ನವ ಆಡಳಿತಗಾರರಿಗೆ ತೀರಾ ಕಸಿವಿಸಿಯುಂಟು ಮಾಡುತ್ತದೆ.

ಕೆಲವು ಸಮಯದ ಹಿಂದೆಯಷ್ಟೇ, ಮಹಾತ್ಮಾ ಗಾಂಧೀಜಿಯವರನ್ನು ‘ಚಾಣಾಕ್ಷ ಬನಿಯಾ’ ಎಂದು ಕ್ಷುಲ್ಲಕ ಗೊಳಿಸುವ ಪ್ರಯತ್ನಗಳು ನಡೆದಿದ್ದವು. ಗಾಂಧೀಜಿಯವರನ್ನು ಗಾಂಧಿ ನಗರದ ನೈತಿಕಪ್ರಜ್ಞೆ ರಹಿತವಾದ ನೈಜ ರಾಜಕಾರಣಿಗಳ ಮಟ್ಟಕ್ಕೆ ತರುವುದೇ ಇದರ ಉದ್ದೇಶವಾಗಿತ್ತು. ಆದರೆ ಅವರನ್ನು ಕ್ಷುಲ್ಲಕಗೊಳಿಸುವ ಹಾಗೂ ಅವರನ್ನು ‘ಸ್ವಾಧೀನ’ಕ್ಕೆ ತೆಗೆದುಕೊಳ್ಳುವ ಚಟುವಟಿಕೆಗಳು ವೇಗವಾಗಿಯೇ ನಡೆಯುತ್ತಿವೆಯಾದರೂ, ಅದಕ್ಕೆ ಹೆಚ್ಚಿನ ಯಶಸ್ಸು ದೊರೆತಿಲ್ಲ. ಆದಾಗ್ಯೂ ಈ ‘ಉಪದ್ರವಕಾರಕ’ ವ್ಯಕ್ತಿಯನ್ನು ತೊಲಗಿಸಲು ಏನನ್ನಾದರೂ ಮಾಡಬೇಕೆಂಬ ಇರಾದೆಯನ್ನು ಹೊಂದಿದವರು ಹಲವರಿದ್ದಾರೆ.

1947ರಲ್ಲಿ ಗಾಂಧೀಜಿ ಹಲವರ ಕಣ್ಣಿಗೆ ಉರಿಯಾಗಿದ್ದರೆ, 70 ವರ್ಷಗಳ ಆನಂತರ ಅವರು ನಮ್ಮ ನವಭಾರತದಲ್ಲಿ ಅದಕ್ಕಿಂತಲೂ ದೊಡ್ಡ ಕಿರಿಕಿರಿಯಾಗಿಬಿಟ್ಟಿದ್ದಾರೆ. ಏನೇ ಇದ್ದರೂ, 1947ರ ಅಕ್ಟೋಬರ್ 2ರಂದು ಅವರು ತನ್ನ ಕೊನೆಯ ಹುಟ್ಟು ಹಬ್ಬವನ್ನು ಆಚರಿಸಿದ ಸಂದರ್ಭದಲ್ಲಿ ದೇಶದ ಜನತೆಗೆ ಎಚ್ಚರಿಕೆಯೊಂದನ್ನು ನೀಡಿದ್ದರು. ‘‘ನಾನು ಭಾರತಕ್ಕೆ ಬಂದಾಗಿನಿಂದ ಕೋಮು ಸೌಹಾರ್ದಕ್ಕಾಗಿ ಶ್ರಮಿಸುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದೇನೆ. ಇಂದು ನಾವು ಶತ್ರುಗಳ ಹಾಗೆ ಭಾಸವಾಗುತ್ತಿದ್ದೇವೆ. ಒಬ್ಬನೇ ಒಬ್ಬ ಪ್ರಾಮಾಣಿಕ ಮುಸ್ಲಿಂ ಇರಲಾರನೆಂದು ನಾವು ಪ್ರತಿಪಾದಿಸುತ್ತಿದ್ದೇವೆ. ಓರ್ವ ಮುಸ್ಲಿಂ ಸದಾಕಾಲವು ಬೆಲೆಯಿಲ್ಲದ ವ್ಯಕ್ತಿಯೆಂಬಂತೆ ನೋಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದಲ್ಲಿ ನನಗೆ ಯಾವ ಸ್ಥಾನಮಾನವಿದೆ ಹಾಗೂ ಇಲ್ಲಿರುವುದರಲ್ಲಿ ನನಗೆ ಯಾವ ಅರ್ಥವಿದೆ’’ ಎಂದವರು ಪ್ರಶ್ನಿಸಿದ್ದರು.

ಆದರೆ ಈ ಮಾತುಗಳು, ಉಕ್ಕಿನ ಪಂಜಾಗಳನ್ನು ಹೆಮ್ಮೆಯಿಂದ ಝಳಪಿಸುವ ವ್ಯಕ್ತಿಗಳಿಗೆ ಪಥ್ಯವಾಗಲಾರದು. ತನ್ನ ರಾಜಕೀಯ ಪಯಣದ ಕನಿಷ್ಠ ಹಂತದಲ್ಲೂ ರಾಷ್ಟ್ರೀಯ ಆತ್ಮದ ಬರ್ಬರೀಕರಣವಾಗುವುದಕ್ಕೆ ಆ ವ್ಯಕ್ತಿ ಅವಕಾಶವನ್ನು ನಿರಾಕರಿಸಿದರು. ಮಹಾತ್ಮಾ ಗಾಂಧೀಜಿಯವರ ಅತಿ ದೊಡ್ಡ ಸಾಧನೆ ಯೆಂದರೆ ಅವರು ತನ್ನನ್ನು ವ್ಯಾಖ್ಯಾನಿಸುವುದಕ್ಕೆ ತನ್ನ ‘ಶತ್ರು’ವಿಗೆ ಎಂದೂ ಅವಕಾಶ ನೀಡಲಿಲ್ಲ. ಅದರ ಬದಲು ಅವರು ಬಹುತ್ವದ ನೈತಿಕ ಶಕ್ತಿಯನ್ನು ಪ್ರಚೋದಿಸುವ ಮೂಲಕ ರಾಷ್ಟ್ರವು ತನ್ನ ಬೆನ್ನೆಲುಬುನ್ನು ಮರಳಿ ಕಂಡುಕೊಳ್ಳು ವಂತೆ ಮಾಡಿದರು. ನಮ್ಮ ಮೂಲಭೂತ ಪ್ರವೃತ್ತಿಗಳ ಓಲೈಕೆ ಮಾಡಲಿಲ್ಲ. ಆದರೆ ನಮ್ಮ ಹಿಂಸಾತ್ಮಕ ಸಂಭವನೀಯತೆಗಳಿಂದ ನಮ್ಮನ್ನು ದೂರಸೆಳೆದರು ಹಾಗೂ ಸಮನ್ವಯತೆಯ ಹಾಗೂ ಪರಸ್ಪರ ಹೊಂದಿಕೊಳ್ಳುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಿದರು. ಉನ್ನತ ನೈತಿಕ ಮನಸ್ಥಿತಿಯು ಅವರಲ್ಲಿದ್ದ ಏಕೈಕ ಅಸ್ತ್ರವಾಗಿತ್ತು ಹಾಗೂ ಅವರು ಬೀದಿ ರಾಜಕಾರಣದ ಅಮಾನುಷ ಬೇಡಿಕೆಗಳಿಗೆ ಮರುಳಾಗಲಿಲ್ಲ.

ನವಭಾರತ ಹಾಗೂ ವಿಭಿನ್ನವಾದ ಭಾರತವನ್ನು ನಿರ್ಮಿಸಲು ನಾವು ಅಹರ್ನಿಶಿ ಶ್ರಮಿಸುತ್ತಿರುವಾಗ ಇಂತಹ ನೈತಿಕತೆಯೇ ಹಾಸುಹೊಕ್ಕಾಗಿರುವ ಈ ವ್ಯಕ್ತಿಯನ್ನು ರಾಷ್ಟ್ರಪಿತನೆಂದು ಎಷ್ಟು ಸಮಯದವರೆಗೆ ಗೌರವಿಸಲು ಸಾಧ್ಯ?. ಲವಲೇಶದಷ್ಟು ನೈತಿಕತೆಯ ಬಗ್ಗೆಯೂ ನಾವು ಕಾಳಜಿ ವಹಿಸದೇ ಇರುವಾಗ ಅವರು ನಮ್ಮ ಮಾರ್ಗದರ್ಶಕ ಶಕ್ತಿ ಹೇಗಾಗುತ್ತಾರೆ?. ಮಹಾತ್ಮಾ ಗಾಂಧೀಜಿಯವರು ನಮ್ಮೆಲ್ಲರನ್ನೂ ನೈತಿಕವಾಗಿ ಮೇಲಕ್ಕೆತ್ತಿದ್ದಾರೆ. ಆದರೆ ಇಂದು ನಮ್ಮನ್ನು ಅಲ್ಪತನ ಹಾಗೂ ಪ್ರತೀಕಾರದ ಭಾವನೆಯನ್ನು ಬೆಳೆಸುವಂತೆ ಪ್ರೇರೇಪಿಸಲಾಗುತ್ತಿದೆ. ಹಿಂಸೆಯೊಂದೇ ‘ಅವರಿಗೆ’ ಅರ್ಥವಾಗುವ ಏಕೈಕ ಭಾಷೆಯೆಂದು ನಮಗೆ ಪ್ರತಿ ಇರುಳಿನಲ್ಲೂ ಹೇಳಲಾಗುತ್ತಿದೆ.

ಇಲ್ಲಿಯೂ ಮತ್ತೆ ಗೊಂದಲ ಉಳಿದುಕೊಳ್ಳುತ್ತದೆ. ಗಾಂಧೀಜಿಯವರು ಅಚಲವಾಗಿ ನಮ್ಮ ರಾಷ್ಟ್ರೀಯ ಅಂತಸಾಕ್ಷಿಯ ಕೇಂದ್ರವಾಗಿ ಉಳಿದುಕೊಳ್ಳುತ್ತಾರೆ. ಅವರ ಮುಂದುವರಿದ ಉಪಸ್ಥಿತಿಯು ನಮ್ಮ ನವಭಾರತದ ಆಯೋಜಕರ ನೀತಿಗಳು ಹಾಗೂ ವರ್ತನೆಗಳನ್ನು ಅಪಹಾಸ್ಯಕರವಾದ ರೀತಿಯಲ್ಲಿ ಅಣಕಿಸುತ್ತದೆ. ಅವರ ಸಂದೇಶವನ್ನು ಅಳಿಸಿಹಾಕುವುದಾಗಲಿ ಅಥವಾ ಅವರನ್ನು ಸಂತನ ಸ್ಥಾನಮಾನದಿಂದ ಪದಚ್ಯುತಗೊಳಿಸುವುದಾಗಲಿ ಸಾಧ್ಯವಿಲ್ಲ. ಅವರ ಇಡೀ ಬದುಕೇ ಉದಾತ್ತವಾದುದಾಗಿದೆ ಹಾಗೂ ಯಾವುದೇ ಸೋಗಿನ ವ್ಯಕ್ತಿಗೂ ಅನುಕರಣೆ ಮಾಡಲು ಸಾಧ್ಯವಿಲ್ಲದಷ್ಟು ತುಂಬಾ ನೈತಿಕತೆಯಿಂದ ಕೂಡಿದೆ. ಸೋಗಲಾಡಿತನದ ಈ ಎಲ್ಲಾ ಪ್ರಯತ್ನಗಳನ್ನು ಕಂಡು ಮಹಾತ್ಮಾ ಅವರು ‘ಹೇ ರಾಮ್’ ಎಂದು ಹೇಳುತ್ತಿದ್ದರೋ ಏನೋ.

ಕೃಪೆ: thewire.in

Writer - ಹರೀಶ್ ಖರೆ

contributor

Editor - ಹರೀಶ್ ಖರೆ

contributor

Similar News