ಮೇರಿಕೋಮ್‌ಗೆ ಸೆಮಿಫೈನಲ್‌ನಲ್ಲಿ ಸೋಲು, ತೀರ್ಪಿನ ಬಗ್ಗೆ ಆಕ್ಷೇಪ

Update: 2019-10-12 09:13 GMT

 ಮಾಸ್ಕೊ, ಅ.12: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಮಹಿಳೆಯರ 51 ಕೆಜಿ ವಿಭಾಗದ ಸೆಮಿ ಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಬುಸೆನಾಝ್ ಕಾಕಿರೊಗ್ಲು ವಿರುದ್ಧ ಸೋಲನುಭವಿಸಿದ ಆರು ಬಾರಿಯ ಚಾಂಪಿಯನ್ ಬಾಕ್ಸರ್ ಎಂಸಿ ಮೇರಿ ಕೋಮ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.ಇದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೇರಿ ಕೋಮ್‌ಗೆ ಲಭಿಸಿದ 8ನೇ ಪದಕವಾಗಿದೆ.

ಯುರೋಪಿಯನ್ ಚಾಂಪಿಯನ್ ಕಾಕಿರೊಗ್ಲು 4-1 ಅಂತರದಿಂದ ಜಯ ಸಾಧಿಸಿದರು. ರವಿವಾರ ನಡೆಯಲಿರುವ ಫೈನಲ್‌ನಲ್ಲಿ ರಶ್ಯದ ಲಿಲಿಯಾ ಎಟ್‌ಬಯೆವಾ ಸವಾಲನ್ನು ಎದುರಿಸಲಿದ್ದಾರೆ.

ಭಾರತದ ಬಾಕ್ಸಿಂಗ್ ನಿಯೋಗ ಸೆಮಿಫೈನಲ್‌ನಲ್ಲಿ ರೆಫರಿ ನೀಡಿದ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಮನವಿ ಮಾಡಿತ್ತು. ಆದರೆ, ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್(ಎಐಬಿಎ)ತಾಂತ್ರಿಕ ಸಮಿತಿ ಭಾರತದ ಮನವಿಯನ್ನು ತಿರಸ್ಕರಿಸಿದೆ.

‘‘ಹೇಗೆ ಹಾಗೂ ಏಕೆ. ಈ ನಿರ್ಧಾರ ಎಷ್ಟು ಸರಿ ಹಾಗೂ ತಪ್ಪು ಎನ್ನುವ ಬಗ್ಗೆ ವಿಶ್ವಕ್ಕೆ ಗೊತ್ತಾಗಬೇಕಾಗಿದೆ’’ ಎಂದು ಸೆಮಿ ಫೈನಲ್‌ನಲ್ಲಿ ಸೋತ ಬಳಿಕ ಮೇರಿ ಕೋಮ್ ಟ್ವೀಟ್ ಮಾಡಿದ್ದಾರೆ.

 36ರ ಹರೆಯದ ಮೇರಿಕೋಮ್ ವಿಶ್ವ ಚಾಂಪಿಯನ್‌ಶಿಪ್‌ವೊಂದರಲ್ಲೇ 6 ಪದಕಗಳನ್ನು ಜಯಿಸಿ ದಾಖಲೆ ನಿರ್ಮಿಸಿದ್ದಾರೆ. 51 ಕೆಜಿ ವಿಭಾಗದಲ್ಲಿ ಮೊದಲ ಬಾರಿ ಕಂಚು ಜಯಿಸಿದ್ದಾರೆ. 2012ರಲ್ಲಿ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಅವರು 5 ಬಾರಿ ಏಶ್ಯನ್ ಪ್ರಶಸ್ತಿ, ಏಶ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News