ಪಾದ ಸ್ಪರ್ಶಿಸಲು ಬಂದ ಅಭಿಮಾನಿಯ ಮೇಲೆ ಬಿದ್ದ ರೋಹಿತ್!

Update: 2019-10-12 09:40 GMT

ಪುಣೆ, ಅ.12: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಮೈದಾನದೊಳಗೆ ನುಸುಳಿದ ಕ್ರಿಕೆಟ್ ಅಭಿಮಾನಿಯೊಬ್ಬ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾರ ಪಾದವನ್ನು ಮುಟ್ಟಲು ಮುಂದಾದ. ಆಗ ಆಯತಪ್ಪಿದ ರೋಹಿತ್ ಅಭಿಮಾನಿಯ ಮೇಲೆಯೇ ಬಿದ್ದ ಘಟನೆ ನಡೆದಿದೆ.

ಸ್ಲಿಪ್‌ನಲ್ಲಿ ನಿಂತಿದ್ದ ರೋಹಿತ್‌ರತ್ತ ತೆರಳಿದ್ದ ಅಭಿಮಾನಿಯೊಬ್ಬ ಪಾದವನ್ನು ಸ್ಪರ್ಶಿಸಲು ಮುಂದಾದ. ಆಗ ಆಯತಪ್ಪಿದ ರೋಹಿತ್ ಅಭಿಮಾನಿಯ ಮೇಲೆಯೇ ಬಿದ್ದರು. ಎಸ್.ಮುತ್ತುಸ್ವಾಮಿ ಔಟಾದ ಬಳಿಕ ವೆರ್ನೊನ್ ಫಿಲ್ಯಾಂಡರ್ ಬ್ಯಾಟಿಂಗ್‌ಗೆ ಆಗಮಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಈಗ ನಡೆಯುತ್ತಿರುವ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸದ ವೇಳೆ ಮೂರನೇ ಬಾರಿ ಈ ಘಟನೆ ನಡೆದಿದೆ. ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಭಾರತದ ನಾಯಕ ವಿರಾಟ್ ಕೊಹ್ಲಿ ಕೈ ಕುಲುಕಿದ ಅಭಿಮಾನಿಯೊಬ್ಬ ಬಳಿಕ ಮೈದಾನದೊಳಗಿದ್ದ ಕ್ರಿಕೆಟಿಗರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದ.

ಉಭಯ ತಂಡಗಳ ಮಧ್ಯೆ ಮೊಹಾಲಿಯಲ್ಲಿ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದ ವೇಳೆ ಮೈದಾನದೊಳಗೆ ನುಗ್ಗಿದ್ದ ಅಭಿಮಾನಿಗಳು ಎರಡು ಬಾರಿ ಪಂದ್ಯಕ್ಕೆ ಅಡ್ಡಿಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News