ಮೆಹಬೂಬಾ ಮುಫ್ತಿ ಪುತ್ರಿಯ ಫೋಟೋ ಬಳಸಿ ದ್ವೇಷದ ಟ್ವೀಟ್: ಈ ಟ್ವಿಟರ್ ಖಾತೆಯ ಹಿಂದೆ ಮೋದಿ ಬೆಂಬಲಿಗ!

Update: 2019-10-12 13:08 GMT

ಹೊಸದಿಲ್ಲಿ, ಅ.12: ಪ್ರಧಾನಿ ನರೇಂದ್ರ ಮೋದಿಯ ಕಟ್ಟಾ ಬೆಂಬಲಿಗನಾಗಿರುವ ಮುಂಬೈ ವ್ಯಕ್ತಿಯೊಬ್ಬ ಮುಸ್ಲಿಂ ಮಹಿಳೆಯ ಹೆಸರಿನಲ್ಲಿ ಟ್ವಿಟರ್ ಖಾತೆ ತೆರೆದು ದ್ವೇಷದ ಟ್ವೀಟ್ ಗಳನ್ನು ಮಾಡುತ್ತಿದ್ದಾನೆ ಎಂದು www.altnews.in ವರದಿ ಮಾಡಿದೆ. ಈತ ನಫೀಸಾ ಅಹ್ಮದ್ ಎನ್ನುವ ಹೆಸರಿನಲ್ಲಿ ಟ್ವಿಟರ್ ಖಾತೆ ತೆರೆದಿದ್ದು, ಈ ಟ್ವಿಟರ್ ಹ್ಯಾಂಡಲ್ ನ ಪ್ರೊಫೈಲ್ ಗೆ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಝಾ ಜಾವೇದ್ ಅವರ ಫೊಟೊ ಅಪ್ಲೋಡ್ ಮಾಡಿದ್ದಾನೆ.

ಈ ಟ್ವಿಟರ್ ಹ್ಯಾಂಡಲ್‍ ನಿಂದ ಬರುವ ಹೆಚ್ಚಿನ ಟ್ವೀಟ್ ಗಳು ಪ್ರಧಾನಿಯನ್ನು ಟೀಕಿಸುವವರನ್ನು ಅವಮಾನಿಸುವಂತಹದ್ದು. ಉದಾಹರಣೆಗೆ ನಟಿ ಸ್ವರಾ ಭಾಸ್ಕರ್ ಕುರಿತಂತೆ ಒಂದು `ವೈಬ್ರೇಟರ್' ಜೋಕ್ ಅಥವಾ ಕಾಂಗ್ರೆಸ್ಸಿನವರನ್ನು `ಶಿಖಂಡಿಗಳೆಂದು' ಜರಿಯುವ ಟ್ವೀಟ್ ಗಳು.

ಈ ಟ್ವಿಟರ್ ಖಾತೆ ಹೊಂದಿದ ವ್ಯಕ್ತಿಯ ಹೆಸರು ಪ್ರೇಮ್ ಎಂದಾಗಿದ್ದು ಆತ ತನ್ನ ಹಲವಾರು ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾನೆ. ಒಂದು ವೀಡಿಯೋದಲ್ಲಿ ಆತ ತನ್ನನ್ನು ಮುಂಬೈಯ ಪ್ರೇಮ್ ಎಂದೂ ಪರಿಚಯಿಸುತ್ತಾನೆ.

ಅಷ್ಟೇ ಅಲ್ಲದೆ ಎಚ್‍ಡಿಎಫ್‍ ಸಿ ಬ್ಯಾಂಕ್ ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡ ಈತನನ್ನು ತನ್ನ ಮಾರ್ಚ್ 2019ರ ಟ್ವೀಟ್ ನಲ್ಲಿ ಪ್ರೇಂ ಎಂದು ಉಲ್ಲೇಖಿಸಿತ್ತು. ಆತ ತನ್ನನ್ನು ಹೆಸರನ್ನು ನಫೀಸಾ ಅಹ್ಮದ್ ಎಂದು ಕರೆಸಿಕೊಳ್ಳುವ ಮುನ್ನ  ತನ್ನ ಸ್ವಂತ ಹೆಸರಿನ ಹ್ಯಾಂಡಲ್ ಹೊಂದಿದ್ದ ಎನ್ನುವುದು ಸ್ಪಷ್ಟ.

ಮೆಹಬೂಬಾ ಮುಫ್ತಿ ಸ್ವತಃ ಈ ಬಗ್ಗೆ ಟ್ವೀಟ್ ಮಾಡಿ ತನ್ನ ಪುತ್ರಿಯ ಫೋಟೋ ಬಳಸದಂತೆ ಹೇಳಿದ್ದರೂ ಆತ ಮಾತ್ರ ಪ್ರೊಫೈಲ್ ನಲ್ಲಿರುವ ಫೋಟೊವನ್ನು ತೆಗೆದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News