ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ಎಸೆಯಬೇಡಿ, ಅವುಗಳನ್ನು ಹೀಗೆ ಬಳಸಿ

Update: 2019-10-12 15:55 GMT

ತರಕಾರಿಗಳ ಸಿಪ್ಪೆಗಳು ಮತ್ತು ಕಾಂಡಗಳನ್ನು ನಾವು ಎಸೆದುಬಿಡುತ್ತೇವೆ. ಆದರೆ ಅವುಗಳನ್ನೂ ಬಳಸಬಹುದು ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಇವು ವಿಟಾಮಿನ್ ಎ,ಸಿ ಮತ್ತು ಇ,ಉತ್ಕರ್ಷಣ ನಿರೋಧಕಗಳು, ಫ್ಲಾವನಾಯ್ಡ್ ಗಳು ಇತ್ಯಾದಿ ಪೋಷಕಾಂಶಗಳ ಅತ್ಯುತ್ತಮ ಮೂಲಗಳಾಗಿವೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳು ಫಿನೈಲ್‌ಪ್ರಾಪನಾಯ್ಡ್ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತವೆ. ಇವು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಅತ್ಯಂತ ಲಾಭದಾಯಕವಾಗಿದ್ದು,ವಯಸ್ಸಾಗುವುದನ್ನು ನಿಧಾನಗೊಳಿಸುವ ಜೊತೆಗೆ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತವೆ,ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಹೃದಯನಾಳಗಳ ಆರೋಗ್ಯವನ್ನು ಕಾಯ್ದುಕೊಳ್ಳುತ್ತವೆ. ಈ ಸಿಪ್ಪೆಗಳನ್ನು ಎಸೆಯುವ ಬದಲು ಹೀಗೆ ಬಳಸಬಹುದು......

► ಸ್ವಾದಿಷ್ಟ ಅನ್ನವನ್ನು ತಯಾರಿಸಿ

ಅನ್ನವನ್ನು ಬೇಯಿಸುವಾಗ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ಅದಕ್ಕೆ ಸೇರಿಸಿ. ಇವು ಸಮಾನ ಪ್ರಮಾಣದಲ್ಲಿ ವಿಟಾಮಿನ್‌ಗಳು ಮತ್ತು ಪೋಷಕಾಂಶಗಳನ್ನು ಒಳಗೊಂಡಿರುವುದರಿಂದ ಅನ್ನದ ಪೌಷ್ಟಿಕತೆಯನ್ನು ಹೆಚ್ಚಿಸುತ್ತವೆ. ನೀವು ಸಿಪ್ಪೆಯನ್ನು ತಿನ್ನಲು ಬಯಸುವುದಿಲ್ಲವಾದರೆ ಅನ್ನ ಬೇಯಿಸುವಾಗ ಸಿಪ್ಪೆಗಳನ್ನು ಸೇರಿಸಿ ಬಳಿಕ ಅದನ್ನು ತೆಗೆದುಬಿಡಿ. ಇದು ಅನ್ನಕ್ಕೆ ಸ್ವಾದವನ್ನು ನೀಡುತ್ತದೆ.

► ಸೂಪ್‌ಗೆ ಸೇರಿಸಿ

ಹೆಚ್ಚುವರಿ ಪೋಷಕಾಂಶಗಳನ್ನು ಪಡೆಯಲು ಈ ಸಿಪ್ಪೆಗಳನ್ನು ಸೂಪ್ ತಯಾರಿಸುವಾಗ ಸೇರಿಸಿ ಬಳಿಕ ಅವುಗಳನ್ನು ಸೋಸಿ ತೆಗೆಯಿರಿ. ಇದರಿಂದ ಅವುಗಳಲ್ಲಿರುವ ಪೋಷಕಾಂಶಗಳು ವ್ಯರ್ಥವಾಗುವುದಿಲ್ಲ.

► ಆಹಾರಕ್ಕೆ ಸ್ವಾದ ನೀಡಲು ಬಳಸಿ

ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ಹುರಿದು ಪುಡಿ ಮಾಡಿಟ್ಟುಕೊಂಡರೆ ಅದನ್ನು ನಿಮ್ಮ ಆಹಾರದಲ್ಲಿ ಫ್ಲೇವರಿಂಗ್ ಏಜೆಂಟ್ ಆಗಿ ಬಳಸಬಹುದು. ಇದು ನಿಮ್ಮ ಆಹಾರಕ್ಕೆ ಸೌಮ್ಯ ಪರಿಮಳವನ್ನು ನೀಡುತ್ತದೆ.

► ಸ್ನಾಯು ಸೆಳೆತಕ್ಕೆ ಪರಿಹಾರ

ಈರುಳ್ಳಿ ಸಿಪ್ಪೆಯು ಸ್ನಾಯುಗಳ ಸೆಳೆತಕ್ಕೆ ಪರಿಣಾಮಕಾರಿ ಪರಿಹಾರವಾಗಿದೆ. ಒಂದು ಕಪ್ ನೀರಿಗೆ ಈ ಸಿಪ್ಪೆಗಳನ್ನು ಸೇರಿಸಿ ಕುದಿಸಿದ ಬಳಿಕ ಅದನ್ನು ಸೋಸಿ ಕುಡಿದರೆ ಸ್ನಾಯುಗಳ ನೋವು ತಕ್ಷಣ ಶಮನಗೊಳ್ಳುತ್ತದೆ. ಇದು ಕೋಲೊರೆಕ್ಟಲ್ ಅಥವಾ ಕರುಳಿನ ಮತ್ತು ಗುದನಾಳದ ಕ್ಯಾನ್ಸರ್‌ನ್ನೂ ತಡೆಯುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

► ಕೂದಲಿಗೆ ಹೊಳಪು ನೀಡುತ್ತದೆ

ಈರುಳ್ಳಿ ಸಿಪ್ಪೆಯು ನೈಸರ್ಗಿಕ ಹೇರ್ ಡೈ ಆಗಿದ್ದು,ತಲೆಗೂದಲಿನ ನೈಸರ್ಗಿಕ ಬಣ್ಣವನ್ನು ಹೆಚ್ಚಿಸುವ ಜೊತೆಗೆ ಅದರ ಕಳೆದು ಹೋದ ಹೊಳಪನ್ನೂ ಮರಳಿಸುತ್ತದೆ. 4-5 ಕಪ್ ನೀರಿನಲ್ಲಿ ಕೆಲವು ಈರುಳ್ಳಿ ಸಿಪ್ಪೆಗಳನ್ನು ಹಾಕಿ ಕುದಿಸಿ. ಕೂದಲಿಗೆ ಶಾಂಪೂ ಮಾಡಿದ ಬಳಿಕ ಈ ನೀರಿನಿಂದ ತೊಳೆದುಕೊಳ್ಳಿ.

► ಒಳ್ಳೆಯ ನಿದ್ರೆಗೆ ಪೂರಕ

ಸುಖನಿದ್ರೆಯಿಂದ ವಂಚಿತರಾಗಿರುವವರಿಗೆ ಈರುಳ್ಳಿ ಸಿಪ್ಪೆಯ ಕಷಾಯ ದಿವ್ಯೌಷಧಿಯಾಗಿದೆ. ನೀರಿನಲ್ಲಿ ಈರುಳ್ಳಿ ಸಿಪ್ಪೆಯನ್ನು ಸೇರಿಸಿ ಕುದಿಸಿ ಮತ್ತು ಹಾಸಿಗೆ ಸೇರುವ ಮುನ್ನ ಈ ನೀರನ್ನು ಸೇವಿಸಿದರೆ ಅದು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ ಮತ್ತು ಶಾಂತಿಯುತ ನಿದ್ರೆ ಮಾಡಲು ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News