14 ಬಿಎಂಟಿಸಿ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಗೃಹ ನಿರ್ಮಾಣ

Update: 2019-10-12 16:18 GMT

ಬೆಂಗಳೂರು, ಅ.12: ಬಾಕಿಯುಳಿದಿರುವ ನಿರ್ಭಯಾ ನಿಧಿಯನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಬಿಎಂಟಿಸಿಯು, ನಗರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ವಿಶ್ರಾಂತಿಗೃಹಗಳನ್ನು ಸ್ಥಾಪಿಸಲು ಮುಂದಾಗಿದೆ.

ಮಹಿಳಾ ಸುರಕ್ಷತೆಗಾಗಿ ಕೇಂದ್ರ ಸರಕಾರ ನಿರ್ಭಯಾ ನಿಧಿ ಸ್ಥಾಪಿಸಿದ್ದು, ರಾಜ್ಯ ಸರಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ಅನುದಾನ ನೀಡಲಾಗುತ್ತದೆ. ಅದರಂತೆ ಬಿಎಂಟಿಸಿಗೆ 33.64 ಕೋಟಿ ರೂ.ಗಳು ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಅದರಲ್ಲಿ ಕೇವಲ 2.37 ಕೋಟಿ ಖರ್ಚು ಮಾಡಿದ್ದು, ಉಳಿಕೆ ಹಣ ಬಾಕಿಯಿಡಲಾಗಿದೆ.

ಇದೀಗ ಬಾಕಿಯಿರುವ ಹಣವನ್ನು ಖರ್ಚು ಮಾಡಲು ಮುಂದಾಗಿರುವ ಬಿಎಂಟಿಸಿ 1 ಸಾವಿರ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳುತ್ತಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪ್ರತ್ಯೇಕ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಅದಕ್ಕೂ ಮೊದಲು ವಿವಿಧ 14 ಬಸ್ ನಿಲ್ದಾಣಗಳಲ್ಲಿ ಪ್ರತ್ಯೇಕ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಯೋಜನೆ ರೂಪಿಸಿ ಚಾಲನೆ ನೀಡಲಾಗಿದೆ.

ಬಿಎಂಟಿಸಿಯ ಪ್ರಮುಖ 15 ಬಸ್ ನಿಲ್ದಾಣಗಳಲ್ಲಿ ವಿಶ್ರಾಂತಿಗೃಹ ಸ್ಥಾಪನೆಗೆ ಪ್ರಸ್ತಾಪಿಸಿತ್ತು. ಆದರೆ, ಶಿವಾಜಿನಗರ ನಿಲ್ದಾಣ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇದನ್ನು ಹೊರತುಪಡಿಸಿ 14 ನಿಲ್ದಾಣಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಯಶವಂತಪುರ ಟಿಟಿಎಂಸಿಯಲ್ಲಿ ವಿಶ್ರಾಂತಿ ಗೃಹ ನಿರ್ಮಾಣ ಪೂರ್ಣಗೊಂಡಿದೆ.

ಏನೆಲ್ಲಾ ಸೌಲಭ್ಯಗಳಿರಲಿವೆ: ಮಹಿಳೆಯರಿಗಾಗಿಯೇ ಪ್ರತ್ಯೇಕವಾಗಿ ಸುಮಾರು 2.25 ಕೋಟಿ ರೂ.ಗಳ ವೆಚ್ಚದಲ್ಲಿ ವಿಶ್ರಾಂತಿ ಗೃಹ ನಿರ್ಮಾಣ ಮಾಡಲಾಗುತ್ತಿದೆ. ಅದರಲ್ಲಿ ಕುಡಿಯುವ ನೀರು, ಫೀಡಿಂಗ್ ಕೊಠಡಿ, ಚೇಂಜಿಂಗ್ ಕೊಠಡಿ, ಮಾಹಿತಿ ಪ್ರದರ್ಶನ, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ, ಶೌಚಗೃಹ, ವೈ-ಪೈ ಸೇವೆಗಳು ಲಭ್ಯವಿರಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News