ಬಿರುಕು ಬಿಟ್ಟ ಟಿಪ್ಪು ಅರಮನೆ: ಪುರಾತತ್ವ ಇಲಾಖೆಯಿಂದ ದುರಸ್ತಿ

Update: 2019-10-12 16:35 GMT

ಬೆಂಗಳೂರು, ಅ.12: ನಗರದ ಕೆ.ಆರ್.ಮಾರುಕಟ್ಟೆ ಬಳಿಯಿರುವ ಪುರಾತನ ಕಾಲದ ಟಿಪ್ಪು ಅರಮನೆಯ ಗೋಡೆಗಳಲ್ಲಿ ಬಿರುಕು ಬಿಟ್ಟಿದ್ದು, ಭಾರತೀಯ ಪುರಾತತ್ವ ಇಲಾಖೆಯು ಇದೀಗ ದುರಸ್ತಿ ಕಾರ್ಯಕ್ಕೆ ಮುಂದಾಗಿದೆ.

18 ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಟಿಪ್ಪು ಅರಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಅರಮನೆಯ ಮೇಲ್ಛಾವಣಿ, ಎರಡನೆ ಅಂತಸ್ತಿನ ಎಡಭಾಗದ ಕೋಣೆ, ಹಿಂಭಾಗ ಸೇರಿದಂತೆ ಕೆಲವು ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ 22 ಲಕ್ಷ ರೂ.ಗಳ ವೆಚ್ಚದಲ್ಲಿ ಅರಮನೆಯ ಮೇಲ್ಛಾವಣಿ ದುರಸ್ತಿ ಹಾಗೂ 10 ಲಕ್ಷ ರೂ.ವೆಚ್ಚದಲ್ಲಿ ಬಿರುಕು ಸರಿಪಡಿಸಲು ಮುಂದಾಗಿದೆ.

1781 ರಲ್ಲಿ ಹೈದರಾಲಿಯು ಕಟ್ಟಿಗೆ ಹಾಗೂ ಗಾರೆ ಅಚ್ಚಿನ ಅರಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಅನಂತರ 1791ರ ಟಿಪ್ಪು ಸುಲ್ತಾನರ ಕಾಲದಲ್ಲಿ ಪೂರ್ಣಗೊಂಡಿತ್ತು. ಅರಮನೆಯು ಒಂದು ಅಂತಸ್ತಿತ ಸ್ತಂಭಗಳ ಮಂಟಪದಂತೆ ಕಂಡರೂ ನೈಜ ಸ್ಥಿತಿಯಲ್ಲಿ ಇಂದಿನ ಸಮಕಾಲೀನ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ.

ಅರಮನೆ ವೀಕ್ಷಣೆಗೆ ಪ್ರತಿದಿನ 200 ಕ್ಕೂ ಅಧಿಕ ಜನರು ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ 600 ಕ್ಕೂ ಅಧಿಕ ಜನರು ಭೇಟಿ ನೀಡುತ್ತಾರೆ. ನಿರಂತರವಾಗಿ ಭದ್ರತಾ ಸಿಬ್ಬಂದಿ ಅರಮನೆಗೆ ಕಾವಲು ಕಾಯುತ್ತಾರೆ. ಅರಮನೆಯ ದುರಸ್ತಿಯ ಜತೆಗೆ ತಡೆಗೋಡೆ ನಿರ್ಮಾಣವೂ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

200 ವರ್ಷಗಳಷ್ಟು ಹಳೆಯದಾದ ಈ ಅರಮನೆಯನ್ನು 1951 ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಅರಮನೆ ಹಾಗೂ ಕೋಟೆಯನ್ನು ತನ್ನ ಸುಪರ್ದಿಗೆ ಪಡೆದು, ರಾಷ್ಟ್ರೀಯ ಸುರಕ್ಷಿತ ಸ್ಮಾರಕ ಎಂದು ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News