‘ದಲಿತ-ಮುಸ್ಲಿಮರು ಒಂದಾಗೋಣ’ ಆಂದೋಲನ ಆರಂಭಿಸಿದ ಪಿಎಫ್‌ಐ

Update: 2019-10-12 16:55 GMT

ಬೆಂಗಳೂರು, ಅ.12- ಸಾಮಾಜಿಕ ಪರಿಸ್ಥಿತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ದಲಿತ-ಮುಸ್ಲಿಂ ಸಮುದಾಯವನ್ನು ಒಗ್ಗೂಡಿಸುವ ಆಂದೋಲನವನ್ನು ಆರಂಭಿಸಲಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ತಿಳಿಸಿದೆ.

ಶನಿವಾರ ನಗರದ ಬೆನ್ಸನ್ ಟೌನ್‌ನ ಇಂಡಿಯನ್ ಸೋಶಿಯಲ್ ಇನ್ಸ್‌ಟಿಟ್ಯೂಟ್ ಸಭಾಂಗಣದಲ್ಲಿ ಪಿಎಫ್‌ಐ ಹಮ್ಮಿಕೊಂಡಿದ್ದ, ‘ದಲಿತ ಮತ್ತು ಮುಸ್ಲಿಂ ಸಮುದಾಯ ಒಗ್ಗೂಡಿ’ ಸಭೆಯ ಬಳಿಕ ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಿಎಫ್‌ಐ ರಾಷ್ಟ್ರೀಯ ಕಾರ್ಯದರ್ಶಿ ಅನಿಸ್ ಅಹ್ಮದ್, ದಲಿತ ಮತ್ತು ಮುಸ್ಲಿಂ ಸಮುದಾಯಗಳು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕಾದರೆ, ಒಂದಾಗಬೇಕಿದೆ ಎಂದರು.

ಸ್ಥಳೀಯ ಮಟ್ಟದಿಂದ ದಲಿತ ಮತ್ತು ಮುಸ್ಲಿಮರನ್ನು ಒಗ್ಗೂಡಿಸಲು, ದಲಿತ ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದ್ದು, ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರ ಮೂಲಕ ಶೋಷಿತ ಸಮುದಾಯದ ಅಭಿವೃದ್ಧಿಯ ಜೊತೆಗೆ, ನಮ್ಮ ಹಕ್ಕುಗಳು ದಮನ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಮುಸ್ಲಿಮ್, ಕ್ರೈಸ್ತರು ಹಾಗೂ ದಲಿತರು ಒಂದಾಗಿ ಒಗ್ಗಟ್ಟು ಪ್ರದರ್ಶಿಸಿದರೆ ಸಾಕು. ಆರೆಸ್ಸೆಸ್ ಮುಖಂಡರಿಗೆ ಹೃದಯಾಘಾತವಾಗಲಿದೆ ಎಂದ ಅವರು, ಮುಸ್ಲಿಂ, ದಲಿತರು ಒಗ್ಗೂಡಿದರೆ ಆಡಳಿತದ ಚುಕ್ಕಾಣಿ ಹಿಡಿಯಬಹುದು. ಅಷ್ಟೇ ಅಲ್ಲದೆ, ಒಂದಾಗಿ ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬಹುದು ಎಂದು ಪ್ರತಿಪಾದಿಸಿದರು.

ಎಸ್‌ಡಿಪಿಎಫ್‌ನ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ದಲಿತರ ಬಳಿ ಎಲ್ಲರೂ ಒಂದು ಎಂಬಂತೆ ನಟನೆ ಮಾಡುವ ಮೂಲಕ, ಅವರ ಮತಗಳನ್ನು ಪಡೆಯಲಾಗುತ್ತದೆ. ಬಳಿಕ ಅವರನ್ನೇ ಗುರಿಯಾಗಿಸಿಕೊಂಡು ದೌರ್ಜನ್ಯ, ಹಿಂಸೆ ನೀಡುವ ಹಲವು ಉದಾಹರಣೆಗಳಿವೆ. ಹಾಗಾಗಿ, ಇದಕ್ಕೆ ಕಡಿವಾಣ ಹಾಕಲು ಮೂಲ ನಿವಾಸಿಗಳು ಒಂದಾಗಬೇಕು ಎಂದು ನುಡಿದರು.

ಆಳುವ ಪಕ್ಷಕ್ಕೆ ಬಡವರ ಬಗ್ಗೆ ಕನಿಕರ, ಕಾಳಜಿ ಇಲ್ಲ. ಅಸಮಾನತೆ ಹೆಚ್ಚಾಗಿದೆ. ಅಸಮಾನತೆಯಿಂದ ದ್ವೇಷ, ಜಿದ್ದು ಬೆಳೆಯುತ್ತಿದೆ ಎಂದು ವಿಷಾದಿಸಿದ ಅವರು, ದಲಿತ ಮತ್ತು ಮುಸ್ಲಿಂ ಒಂದಾಗಿ ಆಂದೋಲನದಿಂದ ಸಾಮಾಜಿಕ ಬದಲಾವಣೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಾ.ತಸ್ಲೀಮ್ ಅಹ್ಮದ್ ರೆಹ್ಮಾನಿ, ದಲಿತ ಮುಖಂಡ ವಿ.ಟಿ.ರಾಜಶೇಖರ್, ಪಿಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಜಿನ್ನಾ, ಎನ್‌ಇಸಿ ಸದಸ್ಯ ಇ.ಎಂ.ಅಬ್ದುಲ್ ರೆಹಮಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News