ಭಾರತಕ್ಕೆ ಕೆಸ್ಟೋ ಬಾಲ್ ಕ್ರೀಡೆ ಪರಿಚಯ: ಮರಿಯಾ ಲೆಟೆಸಿಯಾ

Update: 2019-10-12 16:59 GMT

ಬೆಂಗಳೂರು, ಅ.12: ಅರ್ಜೆಂಟೀನಾ ದೇಶದ ದೈಹಿಕ ಶಿಕ್ಷಣದ ಪಿತಾಮಹ ಎಂದು ಕರೆಸಿಕೊಳ್ಳುವ ಪ್ರೊ.ಎನ್ರೀಕ್ ರೊಮೆರೋ ಬ್ರೀಸ್ಟ್ 1903ರ ಮಾ.17ರಂದು ರೂಪಿಸಿದ ಕೆಸ್ಟೋ ಬಾಲ್ ಕ್ರೀಡೆಯನ್ನು ಇದೀಗ ಭಾರತದಲ್ಲಿಯೂ ಪರಿಚಯಿಸಲು ನಾವು ಮುಂದಾಗಿದ್ದೇವೆ ಎಂದು ತರಬೇತುದಾರೆ ಮರಿಯಾ ಲೆಟೆಸಿಯಾ ತಿಳಿಸಿದರು.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕೆಸ್ಟೋ ಬಾಲ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಇಂಟರ್ ನ್ಯಾಷನಲ್ ಕೆಸ್ಟೋ ಬಾಲ್ ಫೆಡರೇಷನ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಒಂದು ದಿನದ ಅಂತರ್‌ರಾಷ್ಟ್ರೀಯ ರೆಫೆರಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.

ಭಾರತೀಯ ಕ್ರೀಡಾ ಪ್ರೇಮಿಗಳಿಗೆ ಇದೊಂದು ವಿಶಿಷ್ಟವಾದ ಅನುಭವವನ್ನು ನೀಡಲಿದೆ. ಈಗಾಗಲೇ 20ಕ್ಕೂ ಅಧಿಕ ದೇಶಗಳಲ್ಲಿ ಈ ಕ್ರೀಡೆಯನ್ನು ಆಡಲಾಗುತ್ತಿದೆ. ಇದೀಗ ಏಷ್ಯಾ ದೇಶಗಳಲ್ಲೂ ಈ ಕ್ರೀಡೆಗೆ ಉತ್ತಮವಾದ ಸ್ಪಂದನೆ ಸಿಗುತ್ತಿದೆ ಎಂದು ಅವರು ಹೇಳಿದರು.

ಕೆಸ್ಟೋಬಾಲ್ ಫೆಡರೇಷನ್ ಆಫ್ ಇಂಡಿಯಾ(ಸಿಎಫ್‌ಐ)ದ ಮುಖ್ಯಸ್ಥ ಬಿ.ಎಸ್.ರಫೀಉಲ್ಲಾ ಮಾತನಾಡಿ, ಇಂದಿನ ತರಬೇತಿ ಶಿಬಿರದಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿರುವ ನಮ್ಮ ಸಂಘಟನೆಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳನ್ನು ಆಹ್ವಾನಿಸಲಾಗಿದ್ದು, ಸುಮಾರು 100 ಮಂದಿ ಪಾಲ್ಗೊಂಡಿದ್ದಾರೆ ಎಂದರು.

ಈ ಶಿಬಿರದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಕ್ರೀಡೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿದೆ. ಡಿಸೆಂಬರ್‌ನಲ್ಲಿ ಚಿಕ್ಕಬಳ್ಳಾಪುರದಲ್ಲಿ ಜೂನಿಯರ್ ಹಾಗೂ ಸಬ್ ಜೂನಿಯರ್ ಮಟ್ಟದ ಕ್ರೀಡಾಕೂಟ, ಮಾರ್ಚ್‌ನಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ಉತ್ತರಪ್ರದೇಶದಲ್ಲಿ ಹಾಗೂ ಎಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕಾನ್ಫ್‌ಡರೇಷನ್ ಅರ್ಜೆಂಟೀನಾದ ಕೆಸ್ಟೋಬಾಲ್‌ನ ಉಪಾಧ್ಯಕ್ಷ ಡ್ಯಾನಿಯಲ್ ಆಸ್ಕರ್ ರಗ್ಗಿಯೋ, ತರಬೇತುದಾರೆ ಮರಿಯಾ ಅಂಟೋನೆಲ್ಲಾ, ಸಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ ನಾಗಣ್ಣ ಬೋರೇಗೌಡ, ಮಹಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆಖಿಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News