ಕಾವೇರಿ ಜಲಾನಯನ ಪ್ರದೇಶದ ನೀರಾವರಿ ಯೋಜನೆಗಳಿಗೆ ಆದ್ಯತೆ: ಮುಖ್ಯಮಂತ್ರಿ

Update: 2019-10-12 17:02 GMT

ಬೆಂಗಳೂರು, ಅ.12: ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳು, ಕಾಮಗಾರಿಗಳನ್ನು ಹಣಕಾಸಿನ ಇತಿಮಿತಿಯೊಳಗೆ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶನಿವಾರ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯರಾದ ಎಚ್.ಡಿ.ರೇವಣ್ಣ, ಸಿ.ಎನ್.ಬಾಲಕೃಷ್ಣ ಹಾಗೂ ಎ.ಟಿ.ರಾಮಸ್ವಾಮಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಅವರು ಉತ್ತರ ನೀಡಿದರು.

ಪ್ರಗತಿಯಲ್ಲಿರುವ ಯಾವ ಕಾಮಗಾರಿಗಳನ್ನು ನಮ್ಮ ಸರಕಾರ ನಿಲ್ಲಿಸಿಲ್ಲ. ಹಣಕಾಸಿನ ಇತಿಮಿತಿಯೊಳಗೆ ಕಾವೇರಿ ನೀರಾವರಿ ನಿಗಮದ ಮೂಲಕ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಆದ್ಯತೆ ಮೂಲಕ ಪೂರ್ಣಗೊಳಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪ ಮಾಡಿದ ಎಚ್.ಡಿ.ರೇವಣ್ಣ, 2017-18, 2018-19 ಹಾಗೂ 2019-20ನೇ ಸಾಲಿಗಾಗಿ ಕಾವೇರಿ ನೀರಾವರಿ ನಿಗಮದ ಮೂಲಕ ಅನುಷ್ಠಾನಗೊಳಿಸಲು 7150 ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಕೆಲವು ಪ್ರಗತಿಯಲ್ಲಿವೆ, ಕೆಲವು ಟೆಂಡರ್ ಹಂತದಲ್ಲಿವೆ ಇನ್ನು ಕೆಲವು ಕಾಮಗಾರಿಗಳಿಗೆ ಕಾರ್ಯಾದೇಶವಾಗಿದೆ. ಈ ಕಾಮಗಾರಿಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು ಎಂದು ಮನವಿ ಮಾಡಿದರು.

ಎ.ಟಿ.ರಾಮಸ್ವಾಮಿ ಮಾತನಾಡಿ, ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಕಾವೇರಿ ನದಿ ವಿವಾದ ಜ್ವಲಂತವಾಗಿದೆ. ಕಾವೇರಿ ಕೊಳ್ಳದ ನೀರಾವರಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು. ಕಾಲುವೆಗಳ ಆಧುನೀಕರಣ, ದುರಸ್ತಿ ಸೇರಿದಂತೆ ಇನ್ನಿತರ ಕಾಮಗಾರಿಗಳ ಬಗ್ಗೆ ಕ್ರಿಯಾಯೋಜನೆ ಅನುಮೋದನೆಗೊಂಡು ಟೆಂಡರ್ ಸೇರಿದಂತೆ ವಿವಿಧ ಹಂತಗಳಲ್ಲಿದೆ. ಸ್ಥಗಿತಗೊಂಡಿರುವ ಟೆಂಡರ್ ಪ್ರಕ್ರಿಯೆಯನ್ನು ಪುನಃ ಆರಂಭಿಸುವಂತೆ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News