ಅರ್ಧ ಶತಮಾನಕ್ಕೂ ಹೆಚ್ಚು ಹಳೆಯ ಚಿತ್ರಕಲಾ ಮಂದಿರ

Update: 2019-10-13 10:22 GMT

60 ವರ್ಷಗಳ ಹಿಂದೆ ಶಾಲೆಗೆ ಹೋಗುವ ಹಾದಿಯಲ್ಲಿ ಉಡುಪಿಯ ಸಿಟಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಆ ಕಟ್ಟಡವನ್ನು ಹಾದು ಹೋಗುತ್ತಿದ್ದೆ. ಅದನ್ನು ‘ಜಂಗಮರ ಮಠ’ ಎಂದು ಕರೆಯುತ್ತಿದ್ದರು. ಮೊನ್ನೆ ಒಂದು ದಿನ ಕಟ್ಟಡದೊಳಕ್ಕೆ ಹೋದಾಗ ಅಲ್ಲೊಂದು ಕಲಾ ಜಗತ್ತೇ ನಿರ್ಮಾಣವಾಗಿರುವುದನ್ನು ನೋಡಿದೆ. 300 ವರ್ಷಗಳ ಹಿಂದೆ ಕೆಳದಿ ಸಂಸ್ಥಾನದ ಕೆಳದಿ ಸೋಮಶೇಖರ ನಾಯಕ ನಿರ್ಮಿಸಿದ್ದ ಜಂಗಮ ಮಠ ಇಂದು ಉಡುಪಿಯ ಕಲಾ ಶಾಲೆ. ಚಿತ್ರಕಲಾ ಮಂದಿರದ ನೆಲೆಯಾಗಿದೆ. 1765ರಲ್ಲಿ ಉಡುಪಿ ಸಮೀಪದ ಕಟಪಾಡಿಯಲ್ಲಿ ಖ್ಯಾತ ಶಿಕ್ಷಕ ಎಲ್.ಜಿ. ಕಾಮತ್ ಆರಂಭಿಸಿದ್ದ ಚಿತ್ರಕಲಾ ಮಂದಿರವನ್ನು 1980ರ ದಶಕದಲ್ಲಿ ಅವರ ಹಳೆ ವಿದ್ಯಾರ್ಥಿನಿ ಪ್ರಮೀಳಾ ಚೋಳಯ್ಯ ಉಡುಪಿಯಲ್ಲಿ ತಮ್ಮ ನಿವಾಸವಾಗಿದ್ದ ಜಂಗಮಮಠಕ್ಕೆ ತಂದರು. ಇವರ ಪತಿ ಯು. ಚೋಳಯ್ಯ ಅಂದು ಹೈಕೋರ್ಟ್ ನ್ಯಾಯಾಧೀಶರಾಗಿದ್ದರು. ಪ್ರಮೀಳಾ ಚೋಳಯ್ಯ ಮತ್ತು ಅವರ ಪುತ್ರ, ಚಿತ್ರಕಲಾಮಂದಿರದ ನಿರ್ದೇಶಕ ಪ್ರೊ. ಯು.ಸಿ. ನಿರಂಜನ್‌ರವರ ಅವಿರತ ಪ್ರಯತ್ನದ ಹಾಗೂ ದೂರದೃಷ್ಟಿಯ ಫಲವಾಗಿ ಚಿತ್ರಕಲಾ ಮಂದಿರ ಇಂದು 5 ವರ್ಷಗಳ ಬ್ಯಾಚುಲರ್ ಆಫ್ ವಿಷುವಲ್ ಆರ್ಟ್ಸ್ (ಬಿವಿಎ) ಎಂಬ ಪದವಿ ನೀಡುವ ಶಿಕ್ಷಣ ಸಂಸ್ಥೆಯಾಗಿ ಕರ್ನಾಟಕದಲ್ಲಿ ಮುನ್ನಡೆಯುತ್ತಿದೆ.

ಈಗ ಹಂಪಿ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದಿರುವ ಈ ಪದವಿ ಪಡೆದ ವಿದ್ಯಾರ್ಥಿಗಳು ಪೈಂಟಿಂಗ್, ಕಂಪ್ಯೂಟರ್ ಗ್ರಾಫಿಕ್ಸ್, ಮ್ಯೂರಲ್ ಕಲೆ ಹಾಗೂ ಛಾಯಾಚಿತ್ರಗ್ರಹಣದಲ್ಲಿ ತರಬೇತಿ ಪಡೆದು ಅನಿಮೇಶನ್, ಕಲಾವಿನ್ಯಾಸ, ಕಲಾ ನಿರ್ದೇಶನ ರಂಗಗಳಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ. ಚಿತ್ರಕಲಾ ಮಂದಿರ ನಡೆಸುವ ಚಿತ್ರಕಲಾ ಪ್ರದರ್ಶನ ಗಳಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಕಲಾವಿದರ ಕಲಾ ಕೃತಿಗಳ ಜತೆಗೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಜನಮೆಚ್ಚುಗೆ ಗಳಿಸುತ್ತಿದ್ದಾರೆ. ಚಿತ್ರಕಲಾ ಮಂದಿರದ ನಿರ್ದೇಶಕ, ಸಂಘಟಕ, ಕಲಾಪ್ರೇಮಿ ಪ್ರೊಫೆಸರ್ ಯು.ಸಿ. ನಿರಂಜನ್‌ರವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಪ್ರಾಂಶುಪಾಲ ರಾಜೇಂದ್ರ ತ್ರಾಸಿಯವರು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಜಂಗಮ ಮಠದ ಆವರಣವನ್ನು ಪ್ರವೇಶಿಸುತ್ತಿರುವಂತೆಯೇ ವಾಹನಗಳ ಗುಜರಿ ಬಿಡಿ ಭಾಗಗಳನ್ನು ಬಳಸಿ ರಚಿಸಲಾದ ಒಂದು ಡೈನೊಸಾರ್ ನಿಮ್ಮನ್ನು ಸ್ವಾಗತಿಸುತ್ತದೆ.

ಯು.ಸಿ. ನಿರಂಜನ್‌

ಅಕ್ಕಪಕ್ಕದಲ್ಲೇ ತೆಂಗಿನ ಮರದ ಒಣಗಿದ ಕಾಂಡವನ್ನು ಹೊರೆದು ನಿರ್ಮಿಸ ಲಾದ ಕಲಾಕೃತಿಯ ಜತೆಗೆ ವಾಹನಗಳ ಬಿಡಿ ಭಾಗಗಳು, ಸಿಮೆಂಟ್, ಕಲ್ಲುಗಳು ಇತ್ಯಾದಿ ಸಾಮಗ್ರಿಗಳನ್ನು ಬಳಸಿ ನಿರ್ಮಿಸಲಾದ ವಿವಿಧ ರೀತಿಯ ಕಲಾಕೃತಿಗಳು ನೆಡುಗರ ಗಮನ ಸೆಳೆಯುತ್ತವೆ.

 ಇಷ್ಟೇ ಅಲ್ಲ ಕಲಾಮಂದಿರದ ಆವರಣದ ಎತ್ತರವಾದ ಗೋಡೆಯ ಮೇಲೆ ಹಲವು ರೀತಿಯ ತ್ಯಾಜ್ಯ ವಸ್ತುಗಳನ್ನು ಅಂಟಿಸಿ ರಚಿಸಲಾದ ಕಲಾಕೃತಿಗಳು ಆವರಣದ ಒಳಗೆ ಯಾವ ರೀತಿಯ ಕಲಾ ಶಾಲೆ ಇರಬಹುದೆಂಬುದರ ಮುನ್ಸೂಚನೆ ನೀಡುತ್ತದೆ. ಕೆಳದಿ ಶೈಲಿಯಲ್ಲಿ ರಚಿತವಾದ ಮರದ ಕಂಬಗಳು, ಬಾಗಿಲುಗಳು ಹಾಗೂ ಕಿಟಕಿಗಳು ಜಂಗಮ ಮಠದ ಶಿಲ್ಪ ಕಲೆಯ ೈಶಿಷ್ಟವನ್ನು ಅಭಿವ್ಯಕ್ತಿಸುವಂತಿವೆ.

ಚಿತ್ರ ಕಲಾ ಮಂದಿರ ಕಲಾ ಶಾಲೆಯಲ್ಲಿರುವ ಕಲಾಗ್ಯಾಲರಿಯಲ್ಲಿ ಕರ್ನಾಟಕದ ಹಾಗೂ ದೇಶದ ವಿವಿಧ ಭಾಗಗಳ ಕಲಾವಿದರ ಚಿತ್ರಕಲಾ ಪ್ರದರ್ಶನಗಳು ನಡೆಯುತ್ತವೆ. ಇಂತಹ ಕಲಾ ಪ್ರದರ್ಶನಗಳಲ್ಲಿ ಸಾರ್ವಜನಿಕರು, ಆಸುಪಾಸಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರಾಗಿ ಭಾಗವಹಿಸುವಂತೆ ಮಾಡಲು ಸೂಕ್ತ ಯೋಜನೆಗಳನ್ನು ರೂಪಿಸಬೇಕಾಗಿದೆ. ಐಟಿ, ಬಿಟಿ, ಇಂಟರ್‌ನೆಟ್, ವಾಟ್ ್ಸಆ್ಯಪ್, ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಕಳೆದು ಹೋಗುತ್ತಿರುವ ಯುವ ತಲೆಮಾರಿನ ಸೃಜನಶೀಲತೆಗೆ ಚಿತ್ರಕಲಾ ಮಂದಿರ ಒಂದು ಹೊಸ ದಿಕ್ಕು ತೋರಿಸ ಬಲ್ಲದು.

ಕಲಾಸಕ್ತ ವಿದ್ಯಾರ್ಥಿಗಳಿಗೆ ಚಿತ್ರಕಲಾ ಮಂದಿರ ವಸತಿ ಗೃಹ, ಶಿಷ್ಯ ವೇತನ, ಮಧ್ಯಾಹ್ನದ ಊಟ ಒದಗಿಸುತ್ತಿರುವುದು ಇಂದಿನ ದಿನಗಳಲ್ಲಿ ವಿಶೇಷವಾಗಿ ಕೆಳ ಮಧ್ಯಮ ವರ್ಗದ ಹಾಗೂ ಬಡ ಕುಟುಂಬಗಳ ಕಲಾಸಕ್ತ ವಿದ್ಯಾರ್ಥಿಗಳಿಗೆ ಒಂದು ವರದಾನವಾಗಿದೆ. ಕಳೆದ ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಯಲ್ಲಿ 2,000ಕ್ಕೂ ಅಧಿಕ ದೃಶ್ಯ ಕಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಉಡುಪಿಯ ಹೆಮ್ಮೆಯ ಕಲಾ ಶಾಲೆಗೆ ಸರಕಾರ ಹಾಗೂ ಕಲಾಪ್ರೇಮಿ ದಾನಿಗಳಿಂದ ಉದಾರ ನೆರವು ಹರಿದು ಬಂದಲ್ಲಿ ಚಿತ್ರಕಲಾ ಮಂದಿರ ಮುಂದಿನ ವರ್ಷಗಳಲ್ಲಿ ಹೆಮ್ಮೆಯ ಕಲಾಕೇಂದ್ರವಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಬಲ್ಲದು.

ಚಿತ್ರಕಲಾಮಂದಿರದ ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯ 50 ಗ್ರಾಮ ಪಂಚಾಯತ್‌ಗಳ ಶೌಚಾಲಯಗಳ ಗೋಡೆಗಳ ಮೇಲೆ ಭಿತ್ತಿ ಚಿತ್ರಗಳನ್ನು ರಚಿಸಿದ್ದಾರೆ. ದಸರಾ ಮೆರವಣಿಗೆಯ ಸ್ತಬ್ಧ ಚಿತ್ರಗಳು, ಕಾರಂತ /ಕೋಟಿಚೆನ್ನಯ್ಯ ಥೀಮ್ ಪಾರ್ಕ್‌ಗಳಲ್ಲಿ ಸ್ತಬ್ಧ ಚಿತ್ರಗಳು ಕೂಡ ಈ ವಿದ್ಯಾರ್ಥಿಗಳ ಸಾಧನೆಯ ಗರಿಗಳು. ಉಡುಪಿ ಜಿಲ್ಲೆಯ ಕಲಾವಿದರು, ಕಲಾ ಸಂಸ್ಥೆಗಳು, ಗೊಂಬೆಯಾಟ ಸಂಸ್ಥೆಗಳು ಹಾಗೂ ಕಲಾಕೃತಿಗಳ ಕುರಿತು ಚಿತ್ರಕಲಾಮಂದಿರದ ವಿದ್ಯಾರ್ಥಿಗಳು ಬರೆದ 200ಕ್ಕೂ ಹೆಚ್ಚು ಕಿರು ಪ್ರಬಂಧಗಳನ್ನು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಲಾಗಿದೆ.

 ಚಿತ್ರಕಲಾಮಂದಿರ ಉಡುಪಿ ಜಿಲ್ಲೆಯಾದ್ಯಂತ ದೃಶ್ಯ ಕಲಾ ಕಮ್ಮಟಗಳನ್ನು, ಚಿತ್ರಕಲಾಸ್ಪರ್ಧೆ, ಶಿಬಿರ,ಪ್ರಾತ್ಯಕ್ಷಿಕೆ, ಹವ್ಯಾಸಿ ತರಗತಿ/ತರಬೇತಿಗಳನ್ನು ಆಯೋಜಿಸಿ ಕಲೆಯನ್ನು ಜನರ ಬಳಿ ಕೊಂಡೊಯ್ಯುವ ಕೆಲಸ ಮಾಡಿದೆ.

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News