ಕಾಂಗ್ರೆಸ್ ನಾಯಕರ ಮೇಲಿನ ಐಟಿ ದಾಳಿ ಅನುಮಾನಾಸ್ಪದ: ಮಾಜಿ ಪ್ರಧಾನಿ ದೇವೇಗೌಡ

Update: 2019-10-13 16:32 GMT

ಬೆಂಗಳೂರು, ಅ.13: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಡಾ.ಜಿ.ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ನಿವಾಸ, ಸಂಸ್ಥೆಗಳ ಮೇಲಿನ ಐಟಿ(ಜಾರಿ ನಿರ್ದೇಶನಾಲಯ)ಅಧಿಕಾರಿಗಳು ದಾಳಿ ನಡೆಸುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 300 ಮೆಡಿಕಲ್ ಕಾಲೇಜುಗಳಿವೆ. ಈ ಪೈಕಿ ಶೇ.80 ರಷ್ಟು ಕಾಲೇಜುಗಳು ನಿಯಮಾವಳಿಗಳ ಪ್ರಕಾರ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಪರಮೇಶ್ವರ್‌ರವರ ಶಿಕ್ಷಣ ಸಂಸ್ಥೆಗಳು ಅವರ ತಂದೆಯ ಕಾಲದ್ದಾಗಿದೆ. ಕೆಲವು ದಶಕಗಳಿಂದೀಚೆಗಷ್ಟೆ ಆ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೊತ್ತಿದ್ದಾರೆ. ಈಗ ಏಕಾಏಕಿ ಐಟಿ ದಾಳಿ ನಡೆದಿರುವುದು ಅನುಮಾನ ಮೂಡಿಸುವಂತಿದೆ ಎಂದು ತಿಳಿಸಿದರು.

ಮೈತ್ರಿ ಸರಕಾರದ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದ ಡಿ.ಕೆ.ಶಿವಕುಮಾರ್ ಹಾಗೂ ಡಾ.ಜಿ.ಪರಮೇಶ್ವರ್ ಮೆನೆ, ಕಚೇರಿಗಳ ಮೇಲೆ ಐಟಿ ದಾಳಿ ನಡೆದಿರುವುದು ಯಾವ ಕಾರಣಕ್ಕೆ ಎಂಬುದನ್ನು ಈಗಲೇ ನಿಖರವಾಗಿ ಹೇಳಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಇದೆಲ್ಲವೂ ಬಯಲಿಗೆ ಬರಲಿದೆ ಎಂದು ಅವರು ಹೇಳಿದರು.

ಸರಕಾರಿ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಮುಖ್ಯಮಂತ್ರಿಗಳಿಗೆ ಈ ಕುರಿತು ಪತ್ರ ಬರೆಯುತ್ತೇನೆ. ಇದೇ ರೀತಿ ಮುಂದುವರೆದರೆ ನಾನು ನಿಮ್ಮ ಜೊತೆ(ಮಾಧ್ಯಮಗಳ)ಸೇರಿ ಪ್ರತಿಭಟನೆ ನಡೆಸುತ್ತೇನೆ. ಈ ಹಿಂದೆ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರು ಸೆರೆವಾಸ ಅನುಭವಿಸಿದ್ದರು. ಇದನ್ನು ಬಿಜೆಪಿಯವರು ಗಮನದಲ್ಲಿಟ್ಟುಕೊಳ್ಳಬೇಕು. ಮಾಧ್ಯಮದವರನ್ನು ನಿರ್ಬಂಧಿಸಿದ್ದಕ್ಕೆ ಸ್ಪೀಕರ್ ಹೊಣೆಗಾರರಲ್ಲ. ಮುಖ್ಯಮಂತ್ರಿ ಹಾಗೂ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು.

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News