ಬೆಂಗಳೂರು: ‘ಹುಸೇನ್ ದಿನ’ ಆಚರಣೆ- ಸೌಹಾರ್ದಕ್ಕಾಗಿ ಧ್ವನಿಗೂಡಿಸಿದ ಸಂದೇಶ

Update: 2019-10-13 16:44 GMT

ಬೆಂಗಳೂರು, ಅ.13: ಇಮಾಮ್ ಹುಸೇನ್(ರ) ಅವರ ಗುಣಗಾನ, ಉರ್ದು ಶಹರಿಗಳು, ಭಕ್ತಿಯ ಜೈಕಾರಗಳು, ಸೌಹಾರ್ದ ಮತ್ತು ಸಹೋದರತೆಯ ಸಂದೇಶಗಳನ್ನು ಪ್ರವಚನದ ಮೂಲಕ ಸಾರುವ ಮೂಲಕ ‘ಹುಸೇನ್ ದಿನ’ ಆಚರಿಸಲಾಯಿತು.

ರವಿವಾರ ನಗರದ ಜಾನ್ಸನ್ ಮಾರ್ಕೆಟ್ ಬಳಿಯಿರುವ ಶಿಯಾ ಆರಾಮ್‌ಗಾ(ಖಬರಸ್ಥಾನ) ಆವರಣದಲ್ಲಿ 27ನೆ ವಾರ್ಷಿಕ ‘ಹುಸೇನ್ ದಿನ’ವನ್ನು ಶಿಯಾ ಸಮುದಾಯದ ಮುಸ್ಲಿಮರು ಆಚರಿಸಿದರು. ಜತೆಗೆ, ‘ಐಕ್ಯತೆಗಾಗಿ ಜೊತೆಯಾಗಿ’ ಎಂಬುದು ಈ ಬಾರಿಯ ಆಚರಣೆಯ ಧ್ಯೇಯವಾಕ್ಯವಾಗಿತ್ತು. ಇದರಂತೆ ಭಾಗವಹಿಸಿದ್ದ ಅಧ್ಯಾತ್ಮ ಗುರುಗಳು, ಧಾರ್ಮಿಕ ಮುಖಂಡರು, ರಾಜಕಾರಣಿಗಳು ಮತ್ತು ಕಲಾವಿದರು ಕೆಡುಕನ್ನು ತಿರಸ್ಕರಿಸುವ ಹಾಗೂ ಧಾರ್ಮಿಕ ಸಾಮರಸ್ಯ ಬೆಳೆಸುವ ಮಾತುಗಳನ್ನು ಹಂಚಿಕೊಂಡಿದ್ದು, ವಿಶೇಷವಾಗಿತ್ತು.

ಆರಂಭದಲ್ಲಿ ಮಾತನಾಡಿದ ಜೈನ ಧರ್ಮದ ಚಿಂತಕ, ಅಹಿಂಸಾ ವಿಶ್ವ ಭಾರತೀ ಸಂಸ್ಥಾಪಕ ಆಚಾರ್ಯ ಡಾ.ಲೋಕೇಶ್ ಮುನಿ, ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ, ನಾವು ಇಮಾಮ್ ಹುಸೇನ್ ಅವರ ತತ್ವಗಳನ್ನು ಅನುಸರಿಸಬೇಕು ಎಂದು ಸಲಹೆ ಮಾಡಿದರು.

ನಮ್ಮಲ್ಲಿ ಧರ್ಮ, ಜಾತಿ ಎಂಬ ಭಾವನೆಗಳೇ ಹೆಚ್ಚು. ಹಾಗಾಗಿಯೇ ಅವು ಶಾಶ್ವತವಾಗಿ ಉಳಿಸಿಕೊಂಡಿದ್ದೇವೆ. ಆದರೆ, ಇಮಾಮ್ ಹುಸೇನ್ ಅವರು ಹಾಗಿರಲಿಲ್ಲ. ಏಕತೆಯ ಜೀವನಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಸತ್ಯ ಮತ್ತು ನ್ಯಾಯಕ್ಕಾಗಿ ಬಹುದೊಡ್ಡ ಸವಾಲುಗಳನ್ನು ಎದುರಿಸಿ, ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಕೋಮುವಾದ, ಕಾಶ್ಮೀರ, ಅಯೋಧ್ಯೆ ಸೇರಿದಂತೆ ಯಾವುದೇ ವಿವಾದ ಇರಲಿ. ಅದನ್ನು ಹಿಂಸೆಯಿಂದ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಒಮ್ಮೆ ಪರಸ್ಪರ ಕುಳಿತು ಕೊಂಡು ಮಾತುಕತೆ ನಡೆಸಿದರೆ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಡಾ.ಲೋಕೇಶ್ ಮುನಿ ನುಡಿದರು.

ಕರ್ನಾಟಕ ಪ್ರದೇಶ ಕ್ಯಾಥೋಲಿಕ್ ಬಿಷಪ್ ಕೌನ್ಸಿಲ್‌ನ ಕಾರ್ಯನಿರ್ವಹಕ ಕಾರ್ಯದರ್ಶಿಯೂ ಆಗಿರುವ ಕ್ರೈಸ್ತ ಧರ್ಮ ಗುರು ರೆವರೆಂಡ್ ಮೊನ್‌ಸಿಗ್ನೋರ್ ಎಸ್.ಜಯನಾಥನ್ ಮಾತನಾಡಿ, ಎಲ್ಲ ಧರ್ಮಗಳು ತ್ಯಾಗ, ಬಲಿದಾನ, ಸೇವೆ, ಕ್ಷಮೆ, ಕರುಣೆ, ಸದ್ಭಾವನೆಯ ತತ್ವಗಳನ್ನು ಪ್ರತಿಪಾದಿಸುತ್ತವೆ. ಆದರೆ, ದ್ವೇಷಿಸುವಂತ ವಾತಾವರಣವನ್ನು ಕೆಲವು ಶಕ್ತಿಗಳು ನಿರ್ಮಿಸುತ್ತಿವೆ. ಅವರ ವಿರುದ್ಧ ಇಮಾಮ್ ಹುಸೇನ್ ವಾದಿಗಳು ಒಂದಾಗಬೇಕಿದೆ ಎಂದರು.

ಉತ್ತರ ಪ್ರದೇಶದ ಶ್ರೀ ಸ್ವಾಮಿ ಗ್ಲೋಬಲ್ ಪೀಸ್ ಫೌಂಡೇಶನ್ ಸಂಸ್ಥಾಪಕ ಸ್ವಾಮಿ ಸಾರಂಗ್‌ಜಿ ಮಹಾರಾಜ್ ಮಾತನಾಡಿ, ಭಿನ್ನ ನಂಬಿಕೆ, ಸಾಮಾಜಿಕ ವರ್ಗದ ಕಾರಣಕ್ಕೆ ಜನರನ್ನು ದ್ವೇಷಿಸಲಾಗುತ್ತಿದೆ. ಇದರಿಂದ ದೇಶದ ಕೆಲವು ಕಡೆ ನಡುರಸ್ತೆಯಲ್ಲೇ ಹಿಂಸೆಯ ಕೃತ್ಯಗಳು ನಡೆಯುತ್ತಿವೆ. ಮನುಕುಲಕ್ಕೆ ಈಗ ಬೇಕಾಗಿರುವುದು ಇಮಾಮ್ ಹುಸೇನ್ ಪ್ರತಿಪಾದಿಸಿದ ಶಾಂತಿಯ ಸಂದೇಶ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೌಲಾನ ಡಾ.ಹಸನ್ ಕುಮೈಲಿ ವಹಿಸಿದ್ದರು. ಕಾರ್ಯಕ್ರಮದ ಸಂಚಾಲಕ ಆಗಾ ಸುಲ್ತಾನ್ ಸ್ವಾಗತಿಸಿದರು. ಭಾರತದಲ್ಲಿನ ಇರಾನ್ ದೇಶದ ರಾಯಭಾರಿ ಡಾ.ಅಲಿ ಚೆಗಿನಿ , ಬಿಎಸ್ಪಿ ಸಂಸದ ಕೆ.ಡ್ಯಾನಿಷ್ ಅಲಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬೌದ್ಧ ಧಾರ್ಮಿಕ ಮುಖಂಡ ಲಾಮಾ ದುಬೂಮ್ ತುಲ್ಕು, ರಂಗಭೂಮಿ ಕಲಾವಿದ ಆಮಿರ್ ರಝಾ ಹುಸೇನ್, ಪ್ರೊ.ಸಯ್ಯದ್ ಐನುಲ್ ಹಸನ್ ಆಬಿದಿ, ಶಕೀಲ್ ಹಸನ್ ಶಮ್ಸಿ, ಡಾ.ಮುಹಮ್ಮದ್ ಅಬ್ಬಾಸ್ ಖಾಕಿ, ಶೈಲೇಂದ್ರ ಸಿಂಗ್ ಚೌಹಾಣ್, ನಿವೃತ್ತ ಐಎಎಸ್ ಅಧಿಕಾರಿ ಝಮೀರ್ ಪಾಷ, ನಿವೃತ್ತ ಪೊಲೀಸ್ ಅಧಿಕಾರಿ ಅಬ್ದುಲ್ ಅಝೀಂ, ಅಲ್ಲಾಮ ಶಬೀರ್ ಅಲಿ ವಾರ್ಸಿ ಸೇರಿದಂತೆ ಪ್ರಮುಖರಿದ್ದರು.

‘ದುರ್ವಿಚಾರ ಹೊರಗಿಡಿ’

ಮುಸ್ಲಿಮರ ಜತೆ ದ್ವೇಷವನ್ನು ಜೋಡಿಸಲಾಗುತ್ತಿದೆ.ಅಷ್ಟೇ ಅಲ್ಲದೆ, ಅವರನ್ನು ಭಯಗೊಳಿಸಲಾಗುತ್ತಿದೆ.ಇನ್ನೂ, ರಾಜಕೀಯದವರು ಧರ್ಮದ ಮೂಲಕ ದುರ್ವಿಚಾರ ತುಂಬುತ್ತಿದ್ದಾರೆ. ಅಂಥವರನ್ನು ಅಧಿಕಾರದಿಂದ ದೂರವಿರಿಸಬೇಕು.

-ಕೆ.ಡ್ಯಾನಿಷ್ ಅಲಿ, ಬಿಎಸ್ಪಿ ಸಂಸದ

ಸತ್ಯ ಹಾಗೂ ಹಕ್ಕಿಗಾಗಿ 1400 ವರ್ಷಗಳ ಹಿಂದೆ ಇಮಾಮ್ ಹುಸೇನ್ ಕರ್ಬಲಾದಲ್ಲಿ ತಮ್ಮ ಜೀವ ಬಲಿದಾನ ಮಾಡಿದರು. ಇವತ್ತು ಇಮಾಮ್ ಹುಸೇನ್ ಅವರ ಮಾರ್ಗದರ್ಶನದಲ್ಲಿ ಮುಂದುವರೆದು ಸತ್ಯ, ನ್ಯಾಯಕ್ಕಾಗಿ ಪ್ರತಿಯೊಬ್ಬರೂ ಎದ್ದು ನಿಲ್ಲಬೇಕಿದೆ

-ಡಾ.ಅಲಿ ಚೆಗಿನಿ, ಭಾರತದಲ್ಲಿನ ಇರಾನ್ ದೇಶದ ರಾಯಭಾರಿ

ಪ್ರವಾದಿ ಮುಹಮ್ಮದ್(ಸ) ಅವರ ಮೊಮ್ಮಗನಾದ ಹುಸೇನ್ ಅವರು ಸತ್ಯ, ಶಾಂತಿ, ಸೋದರತೆ, ಸಹಬಾಳ್ವೆ ಸಮಾಜದಲ್ಲಿ ನೆಲೆಗೊಳ್ಳುವಂತೆ ಮಾಡಲು ದುಷ್ಟರೊಂದಿಗೆ ಕರ್ಬಲಾ ಕದನದಲ್ಲಿ ಹೋರಾಡುತ್ತಲೇ ಹುತಾತ್ಮರಾದರು ಎಂಬ ನಂಬಿಕೆಯಿಂದ ಶಿಯಾ ಮುಸ್ಲಿಮರು ಪ್ರತಿವರ್ಷ ‘ಹುಸೇನ್ ದಿನ’ ಆಚರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News