ಹಿಂದೂ ಸೇರಿದಂತೆ ಎಲ್ಲರಿಗಾಗಿ ‘ಇಮಾಮ್ ಹುಸೇನ್’: ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್

Update: 2019-10-13 16:48 GMT

ಬೆಂಗಳೂರು, ಅ.13: ಇಮಾಮ್ ಹುಸೇನ್ ಅವರ ಮಾನವೀಯ ಮೌಲ್ಯಗಳು  ಹಿಂದೂ ಸೇರಿದಂತೆ ಎಲ್ಲ ಧರ್ಮಿಯರಿಗೆ ಸೇರಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ನುಡಿದರು.

ರವಿವಾರ ನಗರದ ಜಾನ್ಸನ್ ಮಾರ್ಕೆಟ್ ಬಳಿಯಿರುವ ಶಿಯಾ ಆರಾಮ್‌ಗಾ(ಖಬರಸ್ಥಾನ) ಆವರಣದಲ್ಲಿ 27ನೆ ವಾರ್ಷಿಕ ‘ಹುಸೇನ್ ದಿನ’ದ ಅಂಗವಾಗಿ ಆಯೋಜಿಸಿದ್ದ, ‘ಐಕ್ಯತೆಗಾಗಿ ಜೊತೆಯಾಗಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನ ಆದರ್ಶ ವ್ಯಕ್ತಿಗಳ ಪೈಕಿ ಇಮಾಮ್ ಹುಸೇನ್ ಕೂಡ ಒಬ್ಬರು. ಅವರು ಸ್ಥಾಪಿಸಿದ ಸತ್ಯ ಮತ್ತು ನ್ಯಾಯದ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯವಾಗಿದ್ದು, ಅವರು ಮುಸ್ಲಿಮ್ ಜನಾಂಗಗಕ್ಕೆ ಮಾತ್ರವಲ್ಲದೆ, ಎಲ್ಲರಿಗೂ ಸೇರಿದ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ಯಾವುದೇ ರೀತಿಯ ಅವಘಡಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಈ ಹಿಂದೆ, ಸರಕಾರಗಳ ಮೇಲಿತ್ತು. ಆದರೆ, ಈಗ ಜನರ ಮೇಲಿದೆ. ಅದನ್ನು ಯಾರು ಮರೆಯಬಾರದು ಎಂದ ಅವರು, ಯಾವುದೇ ತೊಂದರೆ ನಡೆದರೂ, ಅದನ್ನು ತಳಮಟ್ಟದಲ್ಲಿರುವ ಬಡವನಿಗೆ ಹೆಚ್ಚು ಗಾಯಗೊಳಿಸುತ್ತಿದೆ. ಇದನ್ನು, ಸಿರಿವಂತರು ಅರ್ಥ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನಾ ಸೇರಿದಂತೆ ಎಲ್ಲ ಧರ್ಮಿಯರಿಗೂ ಶಿಕ್ಷಣ, ಆಸ್ತಿ ಸಂಪಾದನೆ, ಗೌರವ ಒಳಗೊಂಡತೆ, ಸಣ್ಣ ಪುಟ್ಟ ಆಸೆಗಳಿರುತ್ತವೆ.ಆದರೆ, ನಮಗೆ ಬಡತನವೇ ಮೊದಲ ಶತ್ರು, ಅದನ್ನು ನಾಶಪಡಿಸಬೇಕು.ಇದಕ್ಕಾಗಿ ಶಿಕ್ಷಣವೆಂಬ ಅಸ್ತ್ರವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಭಾಸ್ಕರ್ ರಾವ್ ಹೇಳಿದರು.

‘ಉರ್ದು ಸಿಹಿಯಾದ ಭಾಷೆ’
ಉರ್ದು ಭಾಷೆಯಲ್ಲಿಯೇ ಭಾಷಣ ಮಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಉರ್ದು ತುಂಬ ಸಿಹಿಯಾದ ಭಾಷೆಯಾಗಿದೆ.  ಆದರೆ, ಬೆಂಗಳೂರಿನಲ್ಲಿಯೇ ಉರ್ದು ಕಣ್ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘ಧರ್ಮ ನಾಶಪಡಿಸಲು ತಾಕತ್ತಿಲ್ಲ’
ಕೆಲ ಘಟನೆಗಳಿಂದ ಒಂದು ಧರ್ಮಿಯರಿಗೆ ತಮ್ಮ ಧರ್ಮ ಪತನದ ಅಂಚಿನಲ್ಲಿದೆ ಎನ್ನುವ ಭಾವನೆ ಬರುತ್ತದೆ. ಆದರೆ, ಸತತ 30 ವರ್ಷದ ಅನುಭವದ ಮೇಲೆ ಹೇಳುತ್ತೇನೆ, ಇದುವರೆಗೂ ಯಾವ ಧರ್ಮವು ಸಹ ಮತ್ತೊಂದು ಧರ್ಮವನ್ನು ನಾಶಪಡಿಸುವ ತಾಕತ್ತು ಹೊಂದಿಲ್ಲ ಎಂದು ಭಾಸ್ಕರ್ ರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News