ಮಕ್ಕಳ ಆಟದ ಮೈದಾನ ಉಳಿವಿಗಾಗಿ ಹೋರಾಟ 150ನೇ ದಿನಕ್ಕೆ

Update: 2019-10-13 17:12 GMT

ಬೆಂಗಳೂರು, ಅ.13: ಇಲ್ಲಿನ ನಂದಿನಿ ಬಡಾವಣೆಯ ರಾಮಕೃಷ್ಣನಗರ ಮಕ್ಕಳ ಆಟದ ಮೈದಾನವನ್ನು ಖಾಸಗಿ ಸಂಸ್ಥೆಗಳಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವುದನ್ನು ವಾಪಸ್ ಪಡೆದು, ಆಟದ ಮೈದಾನವಾಗಿಯೇ ಉಳಿಸಿಕೊಳ್ಳಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟ 150ನೇ ದಿನಕ್ಕೆ ಮುಟ್ಟಿದೆ. ಆದರೂ ಸರಕಾರದಿಂದ ಯಾವುದೇ ಪೂರಕವಾದ ಸ್ಪಂದನೆ ಸಿಗುತ್ತಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ರಾಮಕೃಷ್ಣನಗರ ಮಕ್ಕಳ ಆಟದ ಮೈದಾನದಲ್ಲಿ ಹಲವು ದಶಕಗಳಿಂದ ವಿದ್ಯಾರ್ಥಿಗಳು, ಹಿರಿಯ ನಾಗರೀಕರು ಹಾಗೂ ಇಲ್ಲಿನ ನಾಗರೀಕರಿಗೆ ಅವಿಭಾಗ್ಯ ಅಂಗವಾಗಿದೆ. ವಿದ್ಯಾರ್ಥಿಗಳು ಆಟವಾಡುವುದು, ಹಿರಿಯರು ವಾಯುವಿಹಾರಕ್ಕೆ, ವ್ಯಾಯಾಮಕ್ಕೆ ತೀರ ಅಗತ್ಯವಾಗಿತ್ತು. ಆದರೆ, ಕೆಲವು ಸ್ವಾರ್ಥ ರಾಜಕಾರಣಿಗಳು ಸ್ವಹಿತಾಸಕ್ತಿಗಾಗಿ ಬಿಡಿಎ(ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಈ ಆಟದ ಮೈದಾನವನ್ನು ಖಾಸಗಿ ಸಂಸ್ಥೆಗಳಿಗೆ ನೀಡಿದೆ.

ವಿದ್ಯಾರ್ಥಿಗಳಿಗೆ, ಇಲ್ಲಿನ ನಾಗರೀಕರಿಗೆ ಮೀಸಲಾಗಿದ್ದ ಆಟದ ಮೈದಾನವನ್ನು ಉಳಿಸಿಕೊಳ್ಳಬೇಕೆಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಸಚಿವೆ ಲಲಿತಾ ನಾಯಕ್, ಚಿತ್ರ ನಟ ಚೇತನ್ ನೇತೃತ್ವದಲ್ಲಿ ದಲಿತಪರ, ಕನ್ನಡಪರ ಸಂಘಟನೆಗಳು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಸರಕಾರ ಈ ಬಗ್ಗೆ ಗಮನ ವಹಿಸುತ್ತಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಬೆಂಗಳೂರಿನ ನೂತನ ಮೇಯರ್ ಗೌತಮ್ ಕುಮಾರ್‌ರನ್ನು ಶಾಲಾ ಮಕ್ಕಳು ಹಾಗೂ ನೂರಾರು ಜನ ಸ್ಥಳೀಯರೊಂದಿಗೆ ಭೇಟಿ ಮಾಡಿ, ಬಿಬಿಎಂಪಿ ತನ್ನ ದಾಖಲೆಗಳಲ್ಲಿ ರಾಮಕೃಷ್ಣ ನಗರ ಮಕ್ಕಳ ಆಟದ ಮೈದಾನವೆಂದು ದಾಖಲಿಸಿ ಕೊಂಡಿರುತ್ತದೆ. ಮತ್ತು ಮಕ್ಕಳ ಆಟದ ಮೈದಾನವೆಂದು ರಾಜ್ಯ ಪತ್ರ ಹೊರಡಿಸುವಂತೆ ಬಿಬಿಎಂಪಿ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನು ಬರೆದಿರುತ್ತಾರೆ. ಇಷ್ಟೆಲ್ಲ ದಾಖಲೆಗಳಿದ್ದರೂ ಆಟದ ಮೈದಾನವನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿರುವುದು ಸರಿಯಲ್ಲ. ಹೀಗಾಗಿ ಆಟದ ಮೈದಾನವನ್ನು ಉಳಿಸಿಕೊಡಿಯೆಂದು ಮನವಿ ಮಾಡಲಾಗಿದೆ. ಆಟದ ಮೈದಾನವನ್ನು ಕಾಂಗ್ರೆಸ್ನ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಸ್ಥಳೀಯ ಅನರ್ಹ ಶಾಸಕ ಕೆ.ಗೋಪಾಲಯ್ಯ, ಮತ್ತು ಮಹಾಲಕ್ಷಿಪುರ ಬ್ರಾಹ್ಮಣ ಸಭಾದವರು ಅಕ್ರಮವಾಗಿ ತಮ್ಮ ರಾಜಕೀಯ ಪ್ರಭಾವವನ್ನು ಬಳಸಿ ಬಿಡಿಎ ವತಿಯಿಂದ ಮಕ್ಕಳ ಆಟದ ಮೈದಾನವನ್ನು ನಿವೇಶನವಾಗಿ ಹಂಚಿಕೆ ಮಾಡಿಸಿಕೊಂಡಿರುತ್ತಾರೆ. ಈ ಅಕ್ರಮದ ವಿರುದ್ಧ ಸೂಕ್ತ ತನಿಖೆ ನಡೆಸಿ ಅಕ್ರಮ ಹಂಚಿಕೆಗಳನ್ನು ರದ್ದುಪಡಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News