ಲಕ್ಷ್ಯಸೇನ್ ಚಾಂಪಿಯನ್

Update: 2019-10-13 18:33 GMT

ಅಲ್ಮೆರ್, ಅ.13: ಭಾರತದ ಉದಯೋನ್ಮುಖ ಶಟ್ಲರ್ ಲಕ್ಷ ಸೇನ್ ಡಚ್ ಓಪನ್ ಬಿಡಬ್ಲುಎಫ್ ಸೂಪರ್-100 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ವಿಶ್ವದ ನಂ.72ನೇ ಆಟಗಾರ ಸೇನ್ ರವಿವಾರ ನಡೆದ ಪುರುಷರ ಸಿಂಗಲ್ಸ್ ನ ಫೈನಲ್‌ನಲ್ಲಿ ಜಪಾನ್‌ನ ಯುಸುಕ್ ಒನೊಡೆರಾರನ್ನು 15-21, 21-14, 21-15 ಗೇಮ್‌ಗಳ ಅಂತರದಿಂದ ಮಣಿಸಿದರು.

 ಮೊದಲ ಗೇಮ್‌ನ್ನು 15-21 ಅಂತರದಿಂದ ಸೋತಾಗ ದೃತಿಗೆಡದೆ ಹೋರಾಟ ಮುಂದುವರಿಸಿದ ಸೇನ್ ವಿಶ್ವದ ನಂ.160ನೇ ಆಟಗಾರ ಒನೊಡೆರಾರನ್ನು ಉಳಿದೆರಡು ಗೇಮ್‌ಗಳಲ್ಲಿ 21-14 ಹಾಗೂ 21-15 ಅಂತರದಿಂದ ಸೋಲಿಸಿದ್ದಾರೆ. ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದ ಒನೊಡೆರಾ ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಸಮೀರ್ ವರ್ಮಾರನ್ನು ಸೋಲಿಸಿ ಗಮನಸೆಳೆದಿದ್ದರು.

ಟೂರ್ನಿಯಲ್ಲಿ ಭಾರತದ ಹಿರಿಯ ಆಟಗಾರರಾದ ಸಮೀರ್ ಹಾಗೂ ಸೌರಭ್ ವರ್ಮಾ ಬೇಗನೆ ನಿರ್ಗಮಿಸಿರುವ ಕಾರಣ ಲಕ್ಷ ಸೇನ್ ಸಾಧನೆ ಮಹತ್ವ ಪಡೆದಿದೆ. ಇದೇ ಮೊದಲ ಬಾರಿ ಸೇನ್ ಬಿಡಬ್ಲುಎಫ್ ಟೂರ್ ಸೂಪರ್-100 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಕಳೆದ ತಿಂಗಳು ಬೆಲ್ಜಿಯಂ ಇಂಟರ್‌ನ್ಯಾಶನಲ್ ಪ್ರಶಸ್ತಿ ಜಯಿಸಿರುವ ಸೇನ್ ಭಾರತದ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿರುವ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡಮಿಯಲ್ಲಿ ತರಬೇತಿ ಪಡೆದಿರುವ 18ರ ಹರೆಯದ ಸೇನ್ ಯೂತ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಹಾಗೂ ಕಳೆದ ವರ್ಷ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಏಶ್ಯನ್ ಜೂನಿಯರ್ ಚಾಂಪಿಯನ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News