ರಾಜ್ಯದ ರೈತರು, ನೆರೆ ಸಂತ್ರಸ್ತರು ಅನಾಥರಾಗಿದ್ದಾರೆ: ಎಚ್.ಎಸ್.ದೊರೆಸ್ವಾಮಿ

Update: 2019-10-14 15:07 GMT

ಬೆಂಗಳೂರು, ಅ.14: ರಾಜ್ಯದ ನೆರೆ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಸೂಕ್ತ ನೆರೆ ಪರಿಹಾರ ಪಡೆಯುವಲ್ಲಿ ರಾಜ್ಯದ ಬಿಜೆಪಿ ನಾಯಕರು ಸೋತಿದ್ದಾರೆ.  ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.

ಸೋಮವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹಮ್ಮಿಕೊಂಡಿದ್ದ ‘ನೆರೆ ಬರ ಸಂತ್ರಸ್ತರ ಬಹಿರಂಗ ಅಧಿವೇಶನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ವಿರೋಧ ಪಕ್ಷವೂ ಕೂಡಾ ತನ್ನ ಕರ್ತವ್ಯ ನಿರ್ವಹಿಸಿಲ್ಲ. ಒಟ್ಟಾರೆಯಾಗಿ ಇಂದು ರಾಜ್ಯದ ರೈತರು, ನೆರೆ ಸಂತ್ರಸ್ತರು ಅನಾಥರಾಗಿದ್ದಾರೆ. ಮುಂದಾದರೂ ಸೂಕ್ತ ಪರಿಹಾರ ಬೇಕು. ಇನ್ನಾದರೂ ಗಟ್ಟಿ ಮನಸ್ಸು ಮಾಡಿ ಪರಿಹಾರ ಕೇಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಸರಕಾರವು ನಮ್ಮ ಹಕ್ಕೊತ್ತಾಯಗಳನ್ನು ಆಲಿಸದಿದ್ದಲ್ಲಿ ಸಚಿವರ ಮನೆಗಳ ಮುಂದೆ ಧರಣಿ ಮಾಡುತ್ತೇವೆ. ಕಳೆದ 19 ವರ್ಷಗಳಲ್ಲಿ ಮೂರು ವರ್ಷ ನೆರೆ ಹಾಗೂ 14 ವರ್ಷ ಬರದಿಂದ ಬಳಲಿದ್ದು, ಇಲ್ಲಿನ ರೈತರಿಗೆ ನೆರವಾಗಲು ಕೇಂದ್ರ ಸರಕಾರ ಒಂದು ಲಕ್ಷ ಕೋಟಿ ರೂ. ಅನುದಾನವನ್ನು ಪರಿಹಾರವಾಗಿ ನೀಡಬೇಕು ಎಂದು ಆಗ್ರಹಿಸಿದರು.

ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ಒಂದು ಎಕರೆ ಕಬ್ಬು ಬೆಳೆಯಲು 50 ಸಾವಿರ ರೂ. ಖರ್ಚು ಮಾಡುತ್ತಿದ್ದೇವೆ. ಎನ್‌ಡಿಆರ್‌ಎಫ್ ಮಾನದಂಡದಲ್ಲಿ ನೀಡುವ 4 ರಿಂದ 5 ಸಾವಿರ ರೂ. ಪರಿಹಾರವು ಹಾನಿಯಾದ ಬೆಳೆಯನ್ನು ತೆರವುಗೊಳಿಸಲೂ ಸಾಧ್ಯವಾಗುವುದಿಲ್ಲ. ಮೊದಲು ನೆರೆ-ಬರ ಪರಿಹಾರಕ್ಕೆ ಈ ಮಾನದಂಡ ಅನುಸರಿಸುವುದನ್ನು ಬಿಟ್ಟು ವೈಜ್ಞಾನಿಕವಾಗಿ ಬೆಲೆ ನಿರ್ಧರಿಸಿ ಪರಿಹಾರ ನೀಡುವಂತಾಗಲಿ ಎಂದರು.

ಸೋಮಣ್ಣ ಆಗಮನ: ಅಧಿವೇಶನ ಸ್ಥಳಕ್ಕೆ ಆಗಮಿಸಿದ ವಸತಿ ಸಚಿವ ಸೋಮಣ್ಣ ರೈತರ ಹಕ್ಕೊತ್ತಾಯ ಸ್ವೀಕರಿಸಿ, ಸರಕಾರ ಪ್ರವಾಹ ಸಂತ್ರಸ್ತರಿಗೆ ಅಗತ್ಯವಾದ ಎಲ್ಲ ರೀತಿಯ ನೆರವು ಕಲ್ಪಿಸಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News