ಬೆಂಗಳೂರು: ಅ.24 ರಿಂದ ಕೃಷಿ ಮೇಳ-2019

Update: 2019-10-14 15:34 GMT

ಬೆಂಗಳೂರು, ಅ.14: ಪ್ರಸಕ್ತ ಸಾಲಿನ ಕೃಷಿ ಮೇಳ-2019 ಅ.24 ರಿಂದ 27 ರವರೆಗೆ ನಗರದ ಜಿಕೆವಿಕೆ ಆವರಣದಲ್ಲಿ ‘ನಿಖರ ಕೃಷಿ ಸುಸ್ಥಿರ ಅಭಿವೃದ್ಧಿ’ ಶೀರ್ಷಿಕೆ ಅಡಿಯಲ್ಲಿ ನಡೆಯಲಿದೆ.

ನಗರದಲ್ಲಿಂದು ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಲಕ್ಷ್ಮಣ್ ಸವದಿ ಕೃಷಿ ಮೇಳದ ಪ್ರಕಟನೆಯನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ರೈತರು ಮತ್ತು ಸಾರ್ವಜನಿಕರು ಕೃಷಿ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ನಿಖರ ಕೃಷಿ ಬೇಸಾಯ ಪದ್ಧತಿಗಳನ್ನು ತಮ್ಮ ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಂಡು ಹೆಚ್ಚಿನ ಆದಾಯ ಗಳಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಶಯದಂತೆ ತಮ್ಮ ಆದಾಯವನ್ನು ದ್ವಿಗುಣಗೊಳಿಸಲು ಮುಂದಾಗಬೇಕೆಂದು ಎಂದು ಹೇಳಿದರು.

ನಿಖರ ಬೇಸಾಯವೆಂದರೆ ಪೂರ್ಣ ಕ್ಷೇತ್ರದ ನಿರ್ವಹಣೆಗೆ ಬದಲಾಗಿ ಕ್ಷೇತ್ರದ ಸಣ್ಣ ಸಣ್ಣ ಭಾಗಗಳನ್ನು ಗಮನದಲ್ಲಿಟ್ಟುಕೊಂಡು ಮಣ್ಣಿನ ಗುಣ ಧರ್ಮ, ಪೋಷಕಾಂಶಗಳ ಲಭ್ಯತೆ, ನೀರಿನ ಲಭ್ಯತೆ ಮತ್ತು ಗುಣಮಟ್ಟ, ಬೇಸಾಯ ಮಾಡುವ ಬೆಳೆಗೆ ನೀರಿನ ಅವಶ್ಯಕತೆ, ಪೋಷಕಾಂಶಗಳ ಅವಶ್ಯಕತೆ, ಕಳೆಗಳ ನಿರ್ವಹಣೆ, ಸಾಂಧ್ರತೆಯನ್ನು ಪ್ರತಿ ಹಂತದಲ್ಲೂ ನಿರ್ವಹಣೆ ಮಾಡುವುದು. ನಿಖರ ಬೇಸಾಯದಲ್ಲಿ ಬೆಳೆ ಉತ್ಪಾದನೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಆಧಾರಿತ ಸಂಪನ್ಮೂಲ ಬಳಕೆಯಿಂದ ಹೆಚ್ಚಿನ ಇಳುವರಿ, ಗುಣಮಟ್ಟ ಹಾಗೂ ಆದಾಯ ಪಡೆಯಲು ಸಾಧ್ಯ. ಕೃಷಿಮೇಳ - 2019ರಲ್ಲಿ ನೀರಿನ ಸದ್ಬಳಕೆಗೆ ಸೂಕ್ಷ್ಮ ನೀರಾವರಿ ಪದ್ಧತಿಗಳಾದ ಹನಿ ಹಾಗೂ ತುಂತುರು ನೀರಾವರಿ, ನೀರಿನೊಂದಿಗೆ ಪೋಷಕಾಂಶ ಪೂರೈಸುವ ರಸಾವರಿ, ಬೆಳೆ ಹಾಗೂ ಮಣ್ಣಿನ ಆಧಾರದ ನೀರು ಹಾಗೂ ಪೋಷಕಾಂಶ ಪೂರೈಕೆಗೆ ಸಂವೇದನ ಆಧಾರಿತ ಸ್ವಯಂ ನೀರಾವರಿ ಪದ್ಧತಿ, ವಿದ್ಯುತ್‌ಗೆ ಪರ್ಯಾಯವಾಗಿ ಸೌರಶಕ್ತಿ ಬಳಕೆ, ದಕ್ಷ ಉತ್ಪಾದನಾ ಕ್ರಮಗಳಾದ ಸಂರಕ್ಷಿತ ಬೇಸಾಯ, ಜಲಕೃಷಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಂತ್ರಜ್ಞಾನಗಳನ್ನೊಳಗೊಂಡ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್, ನಿವೃತ್ತ ಕುಲಸಚಿವ ಡಾ.ಎ.ಬಿ. ಪಾಟೀಲ್, ಪ್ರಾಧ್ಯಾಪಕ ಡಾ.ಕೆ. ಶಿವರಾಮು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News