ಬೌದ್ಧ ಧಮ್ಮದ ಕುರಿತು ಜಾಗೃತಿ ಅಗತ್ಯ: ನಿವೃತ್ತ ಐಪಿಎಸ್ ಅಧಿಕಾರಿ ಡಾ.ಸುಭಾಷ್ ಭರಣಿ

Update: 2019-10-14 15:37 GMT

ಬೆಂಗಳೂರು, ಅ.14: ಇಂದಿನ ಯುವ ಸಮುದಾಯಕ್ಕೆ ಬೌದ್ಧ ಧಮ್ಮದ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಡಾ.ಸುಭಾಷ್ ಭರಣಿ ಹೇಳಿದ್ದಾರೆ.

ಸೋಮವಾರ ನಗರದ ನಾಗಸೇನಾ ಬುದ್ಧ ವಿಹಾರ ಮೈದಾನದಲ್ಲಿ ವಿಶ್ವ ಬುದ್ಧ ಧಮ್ಮ ಸಂಘದ ವತಿಯಿಂದ ಆಯೋಜಿಸಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 63 ನೇ ಧಮ್ಮ ದೀಕ್ಷಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿದ್ಯಾರ್ಥಿಗಳು, ಯುವಜನರಿಗೆ ಧಮ್ಮದ ಕುರಿತು ತಿಳಿಯುವಂತೆ ಮಾಡಬೇಕು. ಅಲ್ಲದೆ, ನಮ್ಮ ನಮ್ಮ ಕುಟುಂಬಗಳಿಂದಲೇ ಧಮ್ಮ ಸ್ವೀಕಾರ ಪ್ರಾರಂಭ ಆಗಬೇಕು. ಆ ಮೂಲಕ ಧಮ್ಮವನ್ನು ಎಲ್ಲೆಡೆ ಪ್ರಸರಿಸುವಂತೆ ಕಾರ್ಯೋನ್ಮುಖರಾಗಬೇಕು ಎಂದ ಅವರು, ಮಕ್ಕಳನ್ನು ಬೌದ್ಧ ಧಮ್ಮದ ಕಡೆಗೆ ಒಲವು ತೋರುವಂತೆ ಮಾಡಬೇಕು ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಯಾವುದೇ ಪ್ರಚಾರವಿಲ್ಲದೆ ಅಂದಿನ ಸಂದರ್ಭದಲ್ಲಿ ಐದು ಲಕ್ಷ ಜನರನ್ನು ಬೌದ್ಧ ದಮ್ಮಕ್ಕೆ ಸೇರಿಸಿದರು. ಆದರೆ, ಇಂದಿನ ಆಧುನಿಕ ಕಾಲಘಟ್ಟದಲ್ಲಿ ಸಾಮಾಜಿಕ ಮಾಧ್ಯಮಗಳಿದ್ದರೂ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರ್ ಮಾಡಿದ ತ್ಯಾಗದ ಕುರಿತು ಜಾಗೃತಿ ಮೂಡಿಸಬೇಕು. ಬುದ್ಧನ ಸೈದ್ದಾಂತಿಕ ನಿಲುವುಗಳನ್ನು ಪಸರಿಸಬೇಕು. ಆ ಮೂಲಕ ಮುಂದಿನ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಧಮ್ಮದ ಕಡೆಗೆ ಸೆಳೆಯುವಂತಾಗಬೇಕು ಎಂದು ಭರಣಿ ಕರೆ ನೀಡಿದರು.

ನಾಗಪುರದ ದೀಕ್ಷಾಭೂಮಿಯಲ್ಲಿ ಇದುವರೆಗೂ ಲಕ್ಷಾಂತರ ಜನರು ದೀಕ್ಷೆ ತೆಗೆದುಕೊಂಡಿರುತ್ತಾರೆ. ಇಂದಿಗೂ ಇಲ್ಲಿ ಆಗಾಗ ಸಾವಿರಾರು ಜನರು ಬೌದ್ಧ ದೀಕ್ಷೆ ತೆಗೆದುಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ನಾನು ಭೇಟಿ ನೀಡಿದ್ದೆ, ಅಂದಾಜು ಒಂದು ಕೋಟಿಗೂ ಅಧಿಕ ಜನರು ಅಲ್ಲಿಗೆ ಭೇಟಿ ನೀಡಿದ್ದರು. ಅವರೆಲ್ಲರೂ ಬೌದ್ಧ ಧಮ್ಮ ಸ್ವೀಕರಿಸುವಂತಾಗಲಿ ಎಂದು ಆಶಿಸಿದರು.

ರಾಜ್ಯದ ಪ್ರತಿ ತಾಲೂಕು, ಜಿಲ್ಲೆ, ಗ್ರಾಮಗಳಲ್ಲಿ ಬೌದ್ಧ ಧಮ್ಮದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ. ಆದುದರಿಂದಾಗಿ, ಎಲ್ಲರೂ ನನ್ನ ಜತೆ ಕೈ ಜೋಡಿಸಿ ಮತ್ತಷ್ಟು ಬಲ ತುಂಬಬೇಕಿದೆ ಎಂದು ಅವರು ಮನವಿ ಮಾಡಿದರು.

ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ದಲಿತರು ದಾಸ್ಯದಿಂದ ಮುಕ್ತರಾಗಿ ಸರ್ವ ಸಮಾನತೆ ಸಾರುವ ಬೌದ್ಧ ಧರ್ಮ ಸೇರಬೇಕು ಎನ್ನುವುದು ಅಂಬೇಡ್ಕರ್‌ರ ಅಂತಿಮ ಆಶಯವಾಗಿತ್ತು. ದಲಿತರು ಎಲ್ಲಿಯವರೆಗೂ ಬೌದ್ಧ ಧರ್ಮ ಸ್ವೀಕರಿಸುವುದಿಲ್ಲವೋ ಅಲ್ಲಿಯವರೆಗೂ ಅಂಬೇಡ್ಕರ್‌ಗೆ ಗೌರವ ಸಲ್ಲಿಸಿದಂತಾಗುವುದಿಲ್ಲ ಎಂದರು.

ವೈಚಾರಿಕ ವೈಜ್ಞಾನಿಕ ಸರ್ವ ಸಮಾನತೆ ಸಂದೇಶ ಸಾರುವ ಬೌದ್ಧ ಧರ್ಮದಲ್ಲಿ ಮಾನವೀಯತೆಯ ಸಾರವಿದ್ದು ಮುಕ್ತಿಯ ಮಾರ್ಗವಿದೆ ಎಂದು ಅಂಬೇಡ್ಕರ್ ತಿಳಿಸಿದ್ದರು. ಆದರೆ, ದಲಿತರಲ್ಲೇ ಮತ್ತೊಂದು ಜಾತಿ ಇದೆ ಎನ್ನುವ ಸಂದೇಹವಿದೆ. ದಲಿತರು ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಿ ಜಾಗೃತರಾಗುತ್ತಿದ್ದು ತಮ್ಮ ದಾಸ್ಯ ಸಂಸ್ಕೃತಿಯಿಂದ ಹೊರಬಂದು ಅಂಬೇಡ್ಕರ್‌ರ ಮಾರ್ಗದಲ್ಲಿ ನಡೆಯಬೇಕಿದೆ ಎಂದು ನುಡಿದರು.

ಇದೇ ವೇಳೆ ನೂರಾರು ಜನರಿಗೆ ಬೌದ್ಧ ಬಿಕ್ಕುಗಳಾದ ಗೋದಿದತ್ತ ಬುದ್ದಮ್ಮ, ಸುಗತಪಾಲೂ ಬಂತೇಜಿ, ನಾಗಪುರದ ಬಿಕ್ಕುರಿ ಗೌತುಮಿ ಸೇರಿದಂತೆ ಬೌದ್ಧ ಬಿಕ್ಕುಗಳ ಬೌದ್ಧ ಧಮ್ಮ ಬೋಧಿಸಿದರು. ಸಮಾರಂಭದಲ್ಲಿ ದಲಿತ ಮುಖಂಡರಾದ ಜಿಗಣಿ ಶಂಕರ್, ಎನ್.ಮೂರ್ತಿ, ವೈ.ಎಸ್.ದೇವೂರ್, ವಕೀಲ ಜೆ.ವಿ.ಶ್ರೀನಿವಾಸ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News