ಆಹಾರದ ಅಲರ್ಜಿ ಮತ್ತು ಆಹಾರದ ಅಸಹಿಷ್ಣುತೆ ಎರಡೂ ಬೇರೆ ಬೇರೆ ಎನ್ನುವುದು ನಿಮಗೆ ಗೊತ್ತೇ?

Update: 2019-10-14 16:23 GMT

ನಿರ್ದಿಷ್ಟ ಆಹಾರವೊಂದನ್ನು ಸೇವಿಸಿದಾಗ ತುರಿಕೆ ಅಥವಾ ಚರ್ಮದಲ್ಲಿ ದದ್ದುಗಳು ಉಂಟಾಗುತ್ತವೆಯೇ? ನೀವಿದನ್ನು ಆಹಾರದ ಅಲರ್ಜಿ ಎನ್ನುವ ನಿರ್ಣಯಕ್ಕೆ ಬರುವ ಮುನ್ನ ಕೊಂಚ ತಡೆಯಿರಿ,ಇದು ಆಹಾರದ ಅಸಹಿಷ್ಣುತೆ ಆಗಿರಬಹುದು. ಸಾಮಾನ್ಯವಾಗಿ ಆಹಾರದ ಅಲರ್ಜಿ ಮತ್ತು ಅಸಹಿಷ್ಣುತೆ ಒಂದೇ ರೀತಿಯಾಗಿ ಕಂಡು ಬರುತ್ತವೆ,ಆದರೆ ಅಲರ್ಜಿಗಳು ಅಸಹಿಷ್ಣುತೆಗಿಂತ ಹೆಚ್ಚು ತೀವ್ರವಾಗಿರುತ್ತವೆ. ಇವು ಮೂಲತಃ ನಮ್ಮ ನಿರೋಧಕ ವ್ಯವಸ್ಥೆಯು ಸಹಿಸಿಕೊಳ್ಳದ ವಸ್ತುಗಳಿಗೆ ದೈಹಿಕ ಪ್ರತಿವರ್ತನೆಗಳಾಗಿವೆ. ಇವು ಆಹಾರವೊಂದನ್ನು ಸೇವಿಸಿದ ಬಳಿಕ ಇಂತಹ ಅಸಹಿಷ್ಣುತೆಯನ್ನು ಸೂಚಿಸುವ ಕೆಲವು ಲಕ್ಷಣಗಳನ್ನು ಪ್ರಕಟಿಸುತ್ತವೆ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಆಹಾರದ ಅಲರ್ಜಿ ಮತ್ತು ಆಹಾರದ ಅಸಹಿಷ್ಣುತೆ ನಡುವೆ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದು ಅಗತ್ಯ.

ಏನಿದು ಆಹಾರದ ಅಸಹಿಷ್ಣುತೆ?

ನಿರ್ದಿಷ್ಟ ಆಹಾರವೊಂದನ್ನು ಸೇವಿಸಿದ ಬಳಿಕ ನಿಮಗೆ ಅಹಿತಕರ ಅನುಭವವಾಗುತ್ತದೆಯೇ? ಹಾಗಿದ್ದರೆ ಅದು ಆಹಾರದ ಅಸಹಿಷ್ಣುತೆ. ಸರಳವಾಗಿ ಹೇಳಬೇಕೆಂದರೆ ನಿಮ್ಮ ಶರೀರವು ಅಸಹಿಷ್ಣುತೆಯಿಂದಾಗಿ ನಿರ್ದಿಷ್ಟ ಆಹಾರದ ಹೆಚ್ಚಿನ ಸೇವನೆಗೆ ಅವಕಾಶ ನೀಡುವುದಿಲ್ಲ. ಅಂದರೆ ನೀವು ಅಂತಹ ಆಹಾರವನ್ನು ನಿಮ್ಮ ಶರೀರಕ್ಕೆ ಯಾವುದೇ ಬಾಧೆಯಾಗದಂತೆ ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು. ಆದರೆ ಸ್ಥಿತಿ ಯಾವಾಗ ಹದಗೆಡುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲದ್ದರಿಂದ ಅಂತಹ ಆಹಾರಗಳಿಂದ ದೂರವುಳಿಯುವುದೇ ಒಳ್ಳೆಯದು.

 ಉದಾಹರಣೆಗೆ ನೀವು ಲ್ಯಾಕ್ಟೋಸ್ ಅಸಹಿಷ್ಣುತೆಯನ್ನು ಹೊಂದಿದ್ದರೆ ನೀವು ಲ್ಯಾಕ್ಟೋಸ್‌ನಿಂದ ಸಂಪೂರ್ಣವಾಗಿ ವಿಮುಖರಾಗಬೇಕು ಎಂದು ಅರ್ಥವಲ್ಲ. ಅಸಹಿಷ್ಣುತೆಯನ್ನು ತಗ್ಗಿಸಲು ನೀವು ಲ್ಯಾಕ್ಟೋಸ್ ಮುಕ್ತ ಉತ್ಪನ್ನಗಳನ್ನು ಮತ್ತು ಲ್ಯಾಕ್ಟೇಸ್ ಎಂಜೈಮ್ ಮಾತ್ರೆಗಳನ್ನು ಸೇವಿಸಬಹುದು.ಇದೇ ರೀತಿ ಹಲವಾರು ಜನರು ಗ್ಲುಟೆನ್‌ಗೆ ಅಲರ್ಜಿ ಹೊಂದಿರುತ್ತಾರೆ.

ಅಸಹಿಷ್ಣುತೆಗೆ ಕಾರಣಗಳು

ಕಿಣ್ವಗಳ ಕೊರತೆ: ಆಹಾರವನ್ನು ವಿಭಜಿಸಲು ಅಗತ್ಯವಿರುವ ಕೆಲವು ಎಂಜೈಮ್‌ಗಳು ಅಥವಾ ಕಿಣ್ವಗಳ ಕೊರತೆಯು ಅಸಹಿಷ್ಣುತೆಗೆ ಕಾರಣವಾಗುತ್ತದೆ. ಲ್ಯಾಕ್ಟೋಸ್ ಅಸಹಿಷ್ಣುತೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ನಮ್ಮ ಶರೀರದಲ್ಲಿ ಲ್ಯಾಕ್ಟೇಸ್ ಕಿಣ್ವದ ಕೊರತೆಯು ಲ್ಯಾಕ್ಟೋಸ್ ಅಸಹಿಷ್ಣುತೆಯನ್ನುಂಟು ಮಾಡುತ್ತದೆ ಮತ್ತು ಇದೇ ಕಾರಣದಿಂದ ಕೆಲವರು ಯಾವುದೇ ಡೇರಿ ಉತ್ಪನ್ನವನ್ನು ಸೇವಿಸಿದ ಬಳಿಕ ಜೀರ್ಣ ಸಮಸ್ಯೆಗಳನ್ನು ಎದುರಿಸುತ್ತಾರೆ.

ಸಂಯೋಜಕಗಳಿಗೆ ಸಂವೇದನಾಶೀಲತೆ: ಆಹಾರ ಉತ್ಪನ್ನಗಳಿಗೆ ಸೇರಿಸಲಾಗುವ ಕೆಲವು ಸಂಯೋಜಕಗಳೂ ಜನರಲ್ಲಿ ಆಹಾರದ ಅಸಹಿಷ್ಣುತೆಗೆ ಕಾರಣವಾಗುತ್ತವೆ.ನೈಟ್ರೇಟ್,ಸಲ್ಫೈಟ್ ಮತ್ತು ಫಾಸ್ಫೇಟ್‌ಗಳು,ಮೊನೊಸೋಡಿಯಂ ಗ್ಲುಟಾಮೇಟ್(ಎಂಎಸ್‌ಜಿ) ಇತ್ಯಾದಿಗಳು ಅಲರ್ಜಿಯನ್ನುಂಟು ಮಾಡುವ ಸಾಮಾನ್ಯ ಸಂಯೋಜಕಗಳಾಗಿವೆ.

ಕರುಳಿನ ಕಿರಿಕಿರಿ: ನಮ್ಮ ಜಠರವು ಕೆಲವು ಆಹಾರಗಳನ್ನು ಜೀರ್ಣಗೊಳಿಸಲು ವಿಫಲಗೊಂಡಾಗ ಅಸಹಿಷ್ಣುತೆ ಉಂಟಾಗುತ್ತದೆ. ಇದಕ್ಕೆ ಕರುಳಿನ ಕಿರಿಕಿರಿ ಕಾರಣವಾಗಿದ್ದು ನಿರ್ದಿಷ್ಟ ಆಹಾರದ ಸೇವನೆಯ ಬಳಿಕ ಜಠರಕ್ಕೆ ಅಹಿತವನ್ನುಂಟು ಮಾಡುತ್ತದೆ . ಇದು ಅತಿಸಾರ,ಸೆಳೆತ,ಮಲಬದ್ಧತೆ ಇತ್ಯಾದಿಗಳಿಗೆ ಕಾರಣವಾಗುತ್ತದೆ.

ಉದರದ ಕಾಯಿಲೆ: ಇವು ನಮ್ಮ ರೋಗ ನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ್ದು,ಅಲರ್ಜಿಯಂತಹುದೇ ಲಕ್ಷಣಗಳನ್ನು ಪ್ರಕಟಿಸುತ್ತವೆ. ಇದು ಗ್ಲುಟೆನ್ ಸೇವನೆಯ ನಂತರದ ಜೀರ್ಣ ಸಮಸ್ಯೆಯಲ್ಲದೆ ಬೇರೇನೂ ಅಲ್ಲ. ಆಹಾರದ ಅಲರ್ಜಿ ಎಂದರೇನು?

ಆಹಾರದ ಅಲರ್ಜಿ ಬಗ್ಗೆ ಹೇಳುವುದಾದರೆ ಅದು ರೋಗ ನಿರೋಧಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುವ ಅಲರ್ಜಿಕ್ ಪ್ರತಿವರ್ತನೆಯಾಗಿದ್ದು,ಕೆಲವು ಸಂದರ್ಭಗಳಲ್ಲಿ ಮಾರಣಾಂತಿಕವೂ ಆಗಬಹುದು. ಆಹಾರದ ಅಸಹಿಷ್ಣುತೆಯನ್ನು ಸುಲಭವಾಗಿ ನಿಯಂತ್ರಿಸಬಹುದು,ಆದರೆ ಅಲರ್ಜಿಕ್ ಪ್ರತಿವರ್ತನೆಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಅಸಹಿಷ್ಣುತೆ ಜೀರ್ಣ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗಿದ್ದರೆ ಅಲರ್ಜಿಗಳು ಅದಕ್ಕಿಂತ ತೀವ್ರ ಸ್ವರೂಪದ್ದಾಗಿರುತ್ತವೆ.

ಶರೀರದ ನಿರೋಧಕ ಶಕ್ತಿಯು ಆಕ್ರಮಣಕೋರ ಎಂದು ಭಾವಿಸುವ ಅಲರ್ಜಿಕಾರಕಗಳು ಅಲರ್ಜಿಯನ್ನುಂಟು ಮಾಡುತ್ತವೆ. ನೀವು ಅಲರ್ಜಿ ಹೊಂದಿರುವ ಯಾವುದೇ ಆಹಾರವನ್ನು ಸೇವಿಸಿದಾಗ ರೋಗ ನಿರೋಧಕ ವ್ಯವಸ್ಥೆಯು ಅದನ್ನು ಆಕ್ರಮಣ ಮಾಡಲು ಬಂದಿರುವ ಬಾಹ್ಯ ವಸ್ತುವೆಂದು ಪರಿಗಣಿಸುತ್ತದೆ ಮತ್ತು ವಿವಿಧ ಲಕ್ಷಣಗಳ ಮೂಲಕ ಅಲರ್ಜಿಕ್ ಪ್ರತಿವರ್ತನೆಯನ್ನು ತೋರಿಸುತ್ತದೆ.

ಕೆಮ್ಮು,ಅನಿಯಂತ್ರಿತ ಸೀನು,ಹೊಟ್ಟೆನೋವು,ಉರಿಯೂತ,ಉಸಿರಾಟದ ತೊಂದರೆ ಇತ್ಯಾದಿಗಳು ಸಾಮಾನ್ಯ ಲಕ್ಷಣಗಳಾಗಿದ್ದು, ಕೆಲವೊಮ್ಮೆ ತೀವ್ರಗೊಂಡು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾಗಬಹುದು.

 ನೀವು ಯಾವುದೇ ಆಹಾರದ ಬಗ್ಗೆ ಅಲರ್ಜಿಯನ್ನು ಹೊಂದಿದ್ದರೆ ಅದನ್ನು ಸೇವಿಸುವುದರಿಂದ ಸಂಪೂರ್ಣವಾಗಿ ದೂರವಿರಿ. ಅಲ್ಲದೆ ಆಕಸ್ಮಿಕವಾಗಿ ಅಂತಹ ಆಹಾರವನ್ನು ಸೇವಿಸಿದರೆ ಸ್ಥಿತಿಯನ್ನು ನಿಭಾಯಿಸಲು ಜೊತೆಯಲ್ಲಿ ಔಷಧಿ ಇಟ್ಟುಕೊಂಡಿರುವುದೂ ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News