ವಿಧಾನಸಭೆ ಕಲಾಪಗಳಿಗೆ ಮಾಧ್ಯಮ ನಿರ್ಬಂಧ ರದ್ದು ಕೋರಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

Update: 2019-10-14 17:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.14: ವಿಧಾನಸಭೆಯ ಕಲಾಪಗಳಿಂದ ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ಆದೇಶ ರದ್ದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಈ ಕುರಿತು ತುಮಕೂರು ಮೂಲದ ವಕೀಲ ಎಲ್.ರಮೇಶ್‌ನಾಯಕ್ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ವಿಧಾನಸಭೆ ಸ್ಪೀಕರ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. 

ವಿಧಾನಸಭೆ ಕಲಾಪಗಳಿಂದ ದೃಶ್ಯ ಮಾಧ್ಯಮಗಳನ್ನು ನಿಷೇಧಿಸಿ ವಿಧಾನಸಭೆ ಸ್ಪೀಕರ್ ಅ.9ರಂದು ಹೊರಡಿಸಿರುವ ಪತ್ರಿಕಾ ಪ್ರಕಟಣೆ ಏಕಪಕ್ಷೀಯ, ಕಾನೂನುಬಾಹಿರವಾಗಿದ್ದು, ಪೂರ್ವಾಲೋಚನೆ ಮಾಡದೇ ಪ್ರಕಟಣೆ ಹೊರಡಿಸಲಾಗಿದೆ. ಹೀಗಾಗಿ, ಈ ಪತ್ರಿಕಾ ಪ್ರಕಟಣೆಯನ್ನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ವಿಧಾನಸಭೆ ಕಲಾಪಗಳಿಂದ ದೃಶ್ಯಮಾಧ್ಯಮಗಳ ಕ್ಯಾಮರಾಗಳು ಹಾಗೂ ಫೋಟೋಗ್ರಾಫರ್‌ಗಳನ್ನು ನಿಷೇಧಿಸಿರುವುದು ತಮ್ಮ ಜನಪ್ರತಿನಿಧಿಗಳ ಕುರಿತು ಮಾಹಿತಿ ಪಡೆದುಕೊಳ್ಳುವ ಮತದಾರರ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಲಿದೆ. ಅಲ್ಲದೇ ಇದು ಸಂವಿಧಾನದ ಕಲಂ 19(1) ಹಾಗೂ 21ಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಸಾರ್ವಜನಿಕ ವ್ಯವಹಾರಗಳ ಕುರಿತು ತಿಳಿದುಕೊಳ್ಳುವುದು ಮೂಲ ಹಕ್ಕು ಆಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ, ಸಾರ್ವಜನಿಕ ಸಂಸ್ಥೆಗಳು ನಿರ್ವಹಿಸುವ ಜವಾಬ್ದಾರಿಗಳನ್ನು ಅರಿತುಕೊಳ್ಳುವುದು ದೇಶದ ಪ್ರಜೆಗಳ ಹಕ್ಕು ಆಗಿದೆ. ಶಾಸಕರು ಮತ್ತು ಸಂಸದರು ಸಾರ್ವಜನಿಕ ಸೇವಕರು ಅನ್ನುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ತೆಗೆದುಕೊಂಡಿರುವ ತೀರ್ಮಾನ ಸುಪ್ರೀಂಕೋರ್ಟ್‌ನ ನಿಲುವಿಗೆ ತದ್ವಿರುದ್ಧವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News