3919 ಕೋಟಿ ರೂ.ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಶೀಘ್ರ ಮಂಜೂರಾತಿಗೆ ಡಿಸಿಎಂ ಕಾರಜೋಳ ಮನವಿ

Update: 2019-10-14 17:43 GMT

ಬೆಂಗಳೂರು, ಅ.14: ರಾಜ್ಯದಲ್ಲಿ 2019-20ನೆ ಸಾಲಿನ ವಾರ್ಷಿಕ ಯೋಜನೆಯಡಿ 3919 ಕೋಟಿ ರೂ.ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಸ್ತಾವನೆಯನ್ನು ಕೇಂದ್ರ ಸಾರಿಗೆ ಸಚಿವಾಲಯಕ್ಕೆ ಸಲ್ಲಿಸಲಾಗಿದ್ದು, ಶೀಘ್ರವಾಗಿ ಮಂಜೂರಾತಿ ನೀಡುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿ ಮಾಡಿದರು. 

ಸೋಮವಾರ ಹೊಸದಿಲ್ಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಆಯೋಜಿಸಿದ್ದ ಏಕರೂಪದ ತೆರಿಗೆ ಟೂಲ್ ಶುಲ್ಕ ಕುರಿತ ಒನ್ ನೇಷನ್-ಒನ್ ಫಾಸ್ಟ್‌ಟ್ಯಾಗ್ ಶೀರ್ಷಿಕೆಯ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 7652 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಇದ್ದು, ಅದರಲ್ಲಿ 4123 ಕಿ.ಮೀ ರಾಷ್ಟ್ರೀಯ ಹೆದ್ದಾರಿಯು ರಾಜ್ಯ ಸರಕಾರದ ಆಡಳಿತಾತ್ಮಕ ನಿಯಂತ್ರಣಕ್ಕೊಳಪಟ್ಟಿದೆ. ರಾಜ್ಯದಲ್ಲಿ 2768 ಕಿ.ಮೀ. ರಸ್ತೆಯು ದ್ವಿಪಥ ರಸ್ತೆಯಾಗಿದ್ದು, ವಾಹನ ಸಂಚಾರ ದಟ್ಟಣೆಯಾಗಿದ್ದು, ಸುಗಮ ಸಂಚಾರಕ್ಕಾಗಿ ಈ ರಸ್ತೆಮಾರ್ಗವನ್ನು ಉನ್ನತೀಕರಿಸಬೇಕಿದೆ ಎಂದು ಗೋವಿಂದ ಕಾರಜೋಳ ಹೇಳಿದರು.

2014-19ನೆ ಸಾಲಿನ ವಾರ್ಷಿಕ ಯೋಜನೆಗೆ ಅನುಮೋದನೆ ದೊರೆತಿದೆ. ಅದರಲ್ಲಿ ವಿವಿಧ 180 ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದ್ದು, ಇದರಲ್ಲಿ 924 ಕಿ.ಮೀ. ಹೆದ್ದಾರಿ ನಿರ್ಮಾಣದ ವಿವಿಧ 122 ಕಾಮಗಾರಿಗಳು ಪೂರ್ಣಗೊಂಡಿವೆ. 1217 ಕಿ.ಮೀ ಹೆದ್ದಾರಿ ನಿರ್ಮಾಣದ 52 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಉಳಿದ 6 ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.

ಕಳೆದ 5 ವರ್ಷಗಳಲ್ಲಿ 3619 ಕೋಟಿ ರೂ.ವೆಚ್ಚದ 1689 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. 2018-19ರಲ್ಲಿ 519 ಕಿ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗಿದೆ. 2019-20ನೆ ಸಾಲಿನಲ್ಲಿ 375 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದು, ಅದರಲ್ಲಿ 116 ಕಿ.ಮೀ ಪೂರ್ಣಗೊಳಿಸಲಾಗಿದೆ ಎಂದು ಕಾರಜೋಳ ವಿವರಣೆ ನೀಡಿದರು.

ಇಐ ಮತ್ತು ಐಎಸ್‌ಸಿ ಯೋಜನೆಯಡಿ 285 ಕೋಟಿ ರೂ.ವೆಚ್ಚದ 4 ಕಾಮಗಾರಿಗಳ ಪ್ರಸ್ತಾವನೆಯನ್ನು ಮಂಜೂರಾತಿಗಾಗಿ ಕೇಂದ್ರ ಭೂ ಸಾರಿಗೆ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗಳಿಗೆ ಶೀಘ್ರವಾಗಿ ಮಂಜೂರಾತಿ ನೀಡುವಂತೆ ಅವರು ಮನವಿ ಮಾಡಿದರು.

ಸಮಾರಂಭದಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ಭೂ ಸಾರಿಗೆ ರಾಜ್ಯ ಖಾತೆ ಸಚಿವ ಜನರಲ್(ನಿವೃತ್ತ್ತ) ವಿ.ಕೆ.ಸಿಂಗ್, ರಾಜ್ಯ ಸರಕಾರದ ಲೋಕೋಪಯೋಗಿ ಕಾರ್ಯದರ್ಶಿ ಗುರುಪ್ರಸಾದ್, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯಅಭಿಯಂತರ ಗೋವಿಂದ ರಾಜು, ಡಿಸಿಎಂ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News