ಚುನಾವಣೆ ವೇಳೆ ಐಟಿ-ಈಡಿ ನಾಟಕ ಆರಂಭ: ಕೆ.ಸಿ.ವೇಣುಗೋಪಾಲ್

Update: 2019-10-15 16:23 GMT

ಬೆಂಗಳೂರು, ಅ.15: ಯಾವುದಾದರೂ ರಾಜ್ಯಗಳಲ್ಲಿ ಚುನಾವಣೆಗಳು ಆರಂಭವಾದರೆ ಸಾಕು ಆದಾಯ ತೆರಿಗೆ ಇಲಾಖೆ(ಐಟಿ) ಹಾಗೂ ಜಾರಿ ನಿರ್ದೇಶನಾಲಯ(ಈಡಿ)ದ ನಾಟಕ ಆರಂಭವಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಆಖ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಾನೂನು ಪಾಲಿಸುವವರು. ಬಿಜೆಪಿ ಮುಖಂಡರ ವಿರುದ್ಧವೂ ಸಾಕಷ್ಟು ಪ್ರಕರಣಗಳಿವೆ. ಆದರೆ, ಅದ್ಯಾವುದನ್ನು ಐಟಿ ಹಾಗೂ ಈಡಿಯವರು ಮುಟ್ಟುತ್ತಿಲ್ಲ ಎಂದರು.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಪತನವಾಗುವ ಸಂದರ್ಭದಲ್ಲಿ ಶಾಸಕರಿಗೆ ಸಾಕಷ್ಟು ಪ್ರಮಾಣದಲ್ಲಿ ಹಣದ ಆಮಿಷವೊಡ್ಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ಇದೆ ಎಂದು ಅವರು ಹೇಳಿದರು.

ಐಟಿ ಮಾದರಿಯಲ್ಲೇ ಈಡಿಯಲ್ಲಿಯೂ ಕೆಲವು ಬಿಜೆಪಿ ನಾಯಕರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆದರೆ, ಬಿಜೆಪಿಯ ಯಾವೊಬ್ಬ ನಾಯಕರ ವಿರುದ್ಧವು ಇವರು ಯಾವುದೇ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತಿಲ್ಲ. ಕೇವಲ ಕಾಂಗ್ರೆಸ್ ಪಕ್ಷದ ನಾಯಕರನ್ನು ಗುರಿಯನ್ನಾಗಿಸಿಕೊಂಡು ದಾಳಿಗಳು ನಡೆಯುತ್ತಿವೆ ಎಂದು ವೇಣುಗೋಪಾಲ್ ಆರೋಪಿಸಿದರು.

ಐಟಿ, ಈಡಿ, ಸಿಬಿಐ ಸಂಸ್ಥೆಗಳು ಬಿಜೆಪಿ ಪಕ್ಷದ ರಾಜಕೀಯ ಕೈಗೊಂಬೆಯಾಗಿವೆ. ದೇಶ ಹಾಗೂ ರಾಜ್ಯದ ಜನರು ಐಟಿ, ಈಡಿ ದಾಳಿಗಳು ಕೇವಲ ಕಾಂಗ್ರೆಸ್ ನಾಯಕರ ಮೇಲೆಯೇ ಯಾಕೆ ನಡೆಯುತ್ತಿವೆ ಎಂದು ಪ್ರಶ್ನಿಸುತ್ತಿದ್ದಾರೆ. ಚುನಾವಣೆಗಳು ಬಂದಾಗ ಇಂತಹ ನಾಟಕಗಳು ಆರಂಭವಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಸಂದರ್ಭದಲ್ಲಿ ಐಟಿ, ಈಡಿ ಹಾಗೂ ಸಿಬಿಐ ಮೇಲೆ ಬಿಜೆಪಿಯವರು ಅವಲಂಬಿತರಾಗುತ್ತಾರೆ. ಈ ಸಾಂವಿಧಾನಿಕ ಸಂಸ್ಥೆಗಳ ಜೊತೆಗೆ ಕೇಂದ್ರ ಚುನಾವಣಾ ಆಯೋಗವು ಸಹ ಪಕ್ಷಪಾತಿಯಾಗಿ ವರ್ತಿಸುತ್ತಿದೆ ಎಂದು ವೇಣುಗೋಪಾಲ್ ದೂರಿದರು.

ಎಲ್ಲ ಕ್ಷೇತ್ರಗಳಲ್ಲಿ ಗೆಲುವು: ಉಪ ಚುನಾವಣೆ ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲುವ ವಿಶ್ವಾಸವಿದೆ. ಬಿಜೆಪಿಯಲ್ಲಿನ ಅತೃಪ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆ ಅಥವಾ ಬೇಡವೇ ಎಂಬುದರ ಕುರಿತು ಅವರ ಯೋಗ್ಯತೆ, ಸಾಮರ್ಥ್ಯದ ಆಧಾರದಲ್ಲಿ ನಿರ್ಧಾರ ಮಾಡಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News