ಗೋಡೆಗೆ ಗುದ್ದಿ ಕೈ ಮುರಿದುಕೊಂಡ ಆಸ್ಟ್ರೇಲಿಯದ ಮಿಚೆಲ್ ಮಾರ್ಷ್!

Update: 2019-10-15 18:33 GMT

ಮೆಲ್ಬೋರ್ನ್, ಅ.15: ಆಸ್ಟ್ರೇಲಿಯದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಶೀಫೀಲ್ಡ್ ಶೀಲ್ಡ್ ಪಂದ್ಯದ ವೇಳೆ ಹತಾಶರಾಗಿ ಡ್ರೆಸ್ಸಿಂಗ್ ರೂಮ್‌ನ ಗೋಡೆಗೆ ಗುದ್ದಿ ಕೈ ಮುರಿದುಕೊಂಡಿರುವ ಅಪರೂಪದ ಘಟನೆ ವರದಿಯಾಗಿದೆ.

ಕೈಗೆ ಗಾಯ ಮಾಡಿಕೊಂಡಿರುವ ಮಾರ್ಷ್ ಆರು ವಾರಗಳ ಕಾಲ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.

 ರವಿವಾರ ತಾಸ್ಮಾನಿಯಾ ವಿರುದ್ಧ ಅಂತಿಮ ದಿನದ ಪಂದ್ಯದಲ್ಲಿ 53 ರನ್‌ಗೆ ಔಟಾಗಿದ್ದ ವೆಸ್ಟರ್ನ್ ಆಸ್ಟ್ರೇಲಿಯದ ನಾಯಕ ಮಾರ್ಷ್ ಗೋಡೆಗೆ ತನ್ನ ಕೈಯನ್ನು ಗುದ್ದಿಕೊಂಡು ತನ್ನ ಆಕ್ರೋಶ ಹೊರಹಾಕಿದ್ದರು. ಈ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು.

ಸ್ಕಾನಿಂಗ್ ವರದಿಯಲ್ಲಿ 27ರ ಹರೆಯದ ಮಾರ್ಷ್ ಬಲಗೈ ಬಿರುಕುಬಿಟ್ಟಿರುವುದು ಪತ್ತೆಯಾಗಿದೆ. ನ.21ರಂದು ಪಾಕಿಸ್ತಾನ ವಿರುದ್ಧ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಮೊದಲು ಫಿಟ್ ಆಗುವ ವಿಶ್ವಾಸದಲ್ಲಿದ್ದಾರೆ.

‘‘ಇದೊಂದು ಖಂಡಿತ ವಾಗಿಯೂ ಒಂಟಿಯಾಗಿದ್ದಾಗ ನಡೆದ ಘಟನೆ. ಇದು ಮತ್ತೊಮ್ಮೆ ನಡೆಯಲಾರದು. ಇದು ನನಗೆ ಉತ್ತಮ ಪಾಠವಾಗಿದೆ. ಇದು ಇತರ ಆಟಗಾರರಿಗೂ ಉತ್ತಮ ಪಾಠವಾಗುವ ವಿಶ್ವಾಸ ನನಗಿದೆ. ಅಂತಿಮವಾಗಿ ಇದೊಂದು ಕ್ರಿಕೆಟ್ ಪಂದ್ಯ. ಕೆಲವೊಮ್ಮೆ ನಾವು ಸೋಲುತ್ತೇವೆ. ಔಟ್ ಆಗುತ್ತೇವೆ. ಆಗ ಗೋಡೆಗೆ ಗುದ್ದಬಾರದು. ಕಳೆದ 18 ತಿಂಗಳುಗಳಿಂದ ನಾಯಕನಾಗಿ ಮಾದರಿಯಾಗಿ ಆಡಲು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ. ಇದು ನನ್ನ ಪಾಲಿಗೆ ಸಣ್ಣ ಹಿನ್ನಡೆಯಾಗಿದೆ’’ ಎಂದು ಸುದ್ದಿಗಾರರಿಗೆ ಮಾರ್ಷ್ ತಿಳಿಸಿದ್ದಾರೆ. ಮಾರ್ಷ್ ಕಳೆದ ತಿಂಗಳು ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಕೊನೆಯ ಪಂದ್ಯಕ್ಕೆ ಆಸ್ಟ್ರೇಲಿಯ ತಂಡಕ್ಕೆ ವಾಪಸಾಗಿದ್ದರು. ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಸಂಪರ್ಕದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News