'ಕಾಶ್ಮೀರಿಯೇತರರ ಮೌನ ಭಯಾನಕ': ದೇಶವ್ಯಾಪಿ ಆಂದೋಲನಕ್ಕೆ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಕರೆ

Update: 2019-10-16 12:31 GMT

ಬೆಂಗಳೂರು, ಅ. 16: ಕಾಶ್ಮೀರವನ್ನು ಸಂಪೂರ್ಣವಾಗಿ ವಿಶ್ವದಿಂದ ಮರೆಮಾಚಿಟ್ಟು ಅ.19ಕ್ಕೆ ಎಪ್ಪತ್ತೈದು ದಿನಗಳಾಗುತ್ತವೆ. ಅಂದು ದೇಶದಾದ್ಯಂತ ಬಾಯಿಗೆ ಟೇಪ್ ಅಂಟಿಸಿಕೊಂಡು ಬಾಯಿ ಮುಚ್ಚಿಕೊಂಡು ದೇಶವ್ಯಾಪಿ ಚಳವಳಿ ನಡೆಸಬೇಕು ಎಂದು ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಕರೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ಕನ್‌ಸರ್ನ್ಡ್ ಸಿಟಿಜನ್ಸ್ ಆಫ್ ಇಂಡಿಯಾ(ಸಿಸಿಐ) ಏರ್ಪಡಿಸಿದ್ದ ‘ನಾಗರಿಕ ಹಕ್ಕುಗಳು ಮತ್ತು ಸವಾಲುಗಳು’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 370ನೆ ವಿಧಿ ಅನೂರ್ಜಿತಗೊಳಿಸಿ 80 ಲಕ್ಷ ಕಾಶ್ಮೀರಿ ಜನರ ಮೇಲೆ ಹಲವು ರೀತಿಯ ನಿರ್ಬಂಧಗಳನ್ನು ಹೇರಿ 70 ದಿನಗಳು ಕಳೆದಿವೆ. ಆದರೆ, ಕಾಶ್ಮೀರಿಯೇತರರ ಮೌನ ಭಯಾನಕವಾಗಿದೆ. ತಮ್ಮದೇ ದೇಶಕ್ಕೆ ಸೇರಿದ ಒಂದು ಭಾಗದ ಜನರ ಸ್ವಾತಂತ್ರ್ಯದ ಹರಣ ವಿರೋಧಿಸಿ ತಮ್ಮ ಪ್ರತಿಭಟನೆಯನ್ನು ದಾಖಲಿಸದೆ ಇಡೀ ದೇಶದ ಜನರು ನಿರ್ಲಿಪ್ತರಾಗಿರುವುದು ಆಘಾತಕಾರಿ. ಪ್ರತಿಭಟನೆ ರಾಷ್ಟ್ರದ್ರೋಹವಲ್ಲ. ಅದು ಒಂದು ಪ್ರಜಾಪ್ರಭುತ್ವದ ಮೂಲ ಸ್ತಂಭ ಎಂದು ಹೇಳಿದರು.

ಸರಕಾರದ ನಿರ್ಧಾರವೊಂದನ್ನು ವಿರೋಧಿಸಿ, ನಾನು ನಂಬಿರುವ ತತ್ವಗಳಿಗೆ ವಿರುದ್ಧವಾಗಿ ನಾನು ನಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದ್ದರಿಂದ, ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದೆ. ನಾನು ನನ್ನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟೆ ಎಂದ ಅವರು, ಸರಕಾರವನ್ನು ವಿರೋಧಿಸುವುದೆಂದರೆ ದೇಶವನ್ನು ವಿರೋಧಿಸುವುದು ಎನ್ನುವ ವ್ಯಾಖ್ಯಾನದಿಂದ ಸರಕಾರದ ತಪ್ಪುಹೆಜ್ಜೆಗಳನ್ನು ವಿರೋಧಿಸುವವರನ್ನು ಬೆದರಿಸಿ, ಅವರ ದನಿಯನ್ನು ಇಂದು ಹತ್ತಿಕ್ಕಲಾಗುತ್ತಿದೆ. ಇದನ್ನು ಜನತಂತ್ರವನ್ನು ಆಶಿಸುವ ಎಲ್ಲರೂ ಉಗ್ರವಾಗಿ ಪ್ರತಿಭಟಿಸಬೇಕು ಎಂದು ಅವರು ಹೇಳಿದರು.

ಮೋದಿ-ಅಮಿತ್ ಶಾ ಜೋಡಿಯ ಕೇಂದ್ರ ಸರಕಾರ ನಿತ್ಯದ ಸಮಸ್ಯೆಗಳಿಂದ ಜನರನ್ನು ವಿಮುಖರನ್ನಾಗಿಸಲು ಹೊಸ-ಹೊಸ ಭಾವನಾತ್ಮಕ ವಿಷಯಗಳನ್ನು ಹೆಕ್ಕಿ ಹೊರತೆಗೆದು ಅಬ್ಬರದ ಪ್ರಚಾರದ ಮೂಲಕ ಜನರ ಮನಸ್ಸನ್ನು ದಿಕ್ಕುತಪ್ಪಿಸಿ, ತಮ್ಮ ಚುನಾವಣಾ ರಾಜಕೀಯವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಇಂತಹ ಸಮಯದಲ್ಲಿ ಜನರು ಎಚ್ಚೆತ್ತುಕೊಂಡು ನಮ್ಮ ಸಂವಿಧಾನದತ್ತ ಹಕ್ಕಾದ ‘ಅಭಿವ್ಯಕ್ತಿಯ ಹಕ್ಕನ್ನು’ ಸಂಪೂರ್ಣವಾಗಿ ಬಳಸಿಕೊಂಡು ಕಾಶ್ಮೀರ, ಎನ್‌ಆರ್‌ಸಿ, ಆರ್ಥಿಕ ಹಿಂಜರಿತ ವಿಷಯಗಳನ್ನು ನಾವು ಗಟ್ಟಿಕಂಠದಿಂದ ನಮ್ಮ ಅಭಿಪ್ರಾಯವನ್ನು ಮಂಡಿಸಬೇಕು. ಆಗ ಮಾತ್ರ ನಾವು ಕೆಟ್ಟ ರಾಜಕಾರಣದಿಂದ ಒಳ್ಳೆಯದನ್ನು ಉಳಿಸಿಕೊಳ್ಳಬಹುದು ಎಂದು ಕಣ್ಣನ್ ಗೋಪಿನಾಥನ್ ಕರೆ ನೀಡಿದರು.

ಸಭೆಯಲ್ಲಿ ಸಿಸಿಐ ಮುಖಂಡರಾದ ಎಸ್.ಎನ್.ಸ್ವಾಮಿ, ಡಾ.ಮೇರಿಜಾನ್ ಪಾಲ್ಗೊಂಡಿದ್ದರು, ಅಧ್ಯಕ್ಷತೆಯನ್ನು ಸಂಚಾಲಕ ಬಿ.ರವಿ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News