ಸೆಕ್ಯುರಿಟಿ ಗಾರ್ಡ್‌ಗಳ ಮೇಲೆ ದೌರ್ಜನ್ಯ ಆರೋಪ: ಸೆಕ್ಯುರಿಟಿ ಫೋರ್ಸ್ ಕಂಪೆನಿ ಸಿಇಓ ಬಂಧನ

Update: 2019-10-16 13:04 GMT

ಬೆಂಗಳೂರು, ಅ.16: ತನ್ನ ಕಂಪೆನಿಯ ಇಬ್ಬರು ಸೆಕ್ಯುರಿಟಿ ಗಾರ್ಡ್‌ಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಂಗಳೂರು ಸೆಕ್ಯುರಿಟಿ ಫೋರ್ಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಎಚ್‌ಎಸ್‌ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಸೆಕ್ಯುರಿಟಿ ಫೋರ್ಸ್ ಕಂಪೆನಿಯ ಸಿಇಓ ಸಲೀಂ ಖಾನ್ ಬಂಧಿತ ಆರೋಪಿ. ತನ್ನ ಸಂಸ್ಥೆಯಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದ ಉತ್ತರ ಭಾರತದ ಮೂಲದ ಫರಿಝುದ್ದೀನ್ ಮತ್ತು ರೈಸುದ್ದೀನ್ ಎಂಬವವರ ಮೇಲೆ ಹಲ್ಲೆ ನಡೆಸಿದ್ದ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂಥ್ ತಿಳಿಸಿದ್ದಾರೆ.

ಘಟನೆ ವಿವರ: ಹಲ್ಲೆಗೊಳಗಾದ ಫರಿಝುದ್ದೀನ್‌ ಮತ್ತು ರೈಸುದ್ದೀನ್ ಎಂಟು ತಿಂಗಳ ಹಿಂದೆ ಬೆಂಗಳೂರು ಸೆಕ್ಯುರಿಟಿ ಫೋರ್ಸ್ ಸಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಮೂರು ತಿಂಗಳ ಸಂಬಳವನ್ನು ಕೊಟ್ಟಿರಲಿಲ್ಲ. ಇತ್ತೀಚೆಗೆ ಇಬ್ಬರು ನೌಕರರು ರಜೆ ಕೇಳಿದ್ದಾರೆ. ಇದಕ್ಕೆ ಮಾಲಕ ಸಲೀಂ ಖಾನ್ ನಿರಾಕರಿಸಿದ್ದ. ಇದರಿಂದ ಬೇಸತ್ತಿದ್ದ ಇಬ್ಬರು ಕೆಲಸಗಾರರು ಬೇರೆ ಕಡೆ ಕೆಲಸಕ್ಕೆ ಹೋಗಲು ನಿರ್ಧರಿಸಿದ್ದರು. ಇದೇ ವಿಚಾರಕ್ಕೆ ಸಿಟ್ಟಾಗಿ ಅವರನ್ನು ಕಚೇರಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News