15 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ: ಎಚ್.ಡಿ.ದೇವೇಗೌಡ

Update: 2019-10-16 15:33 GMT

ಬೆಂಗಳೂರು, ಅ.16: ನಮ್ಮ ಪಕ್ಷದಲ್ಲಿ ಕಾರ್ಯಕರ್ತರೇ ಹೈಕಮಾಂಡ್. ಜೆಡಿಎಸ್‌ನ ಮೂವರು ಅನರ್ಹ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಉಪ ಚುನಾವಣೆ ಎದುರಾದರೇ 15 ಕ್ಷೇತ್ರಗಳಲ್ಲಿಯೂ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಬುಧವಾರ ನಗರದಲ್ಲಿರುವ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅ.22ರಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ ಇದೆ. ಸುಪ್ರೀಂಕೋರ್ಟ್ ತೀರ್ಪು ಏನು ಬರುತ್ತೊ ನೋಡೋಣ ಎಂದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದರೆ ಉಪ ಚುನಾವಣೆ ಬರುತ್ತದೆ. ಇಲ್ಲದಿದ್ದರೆ, ಇಲ್ಲ. ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಅವರು ಹೇಳಿದರು.

ಶಾಸಕ ಸಾ.ರಾ.ಮಹೇಶ್ ಹಾಗೂ ಅನರ್ಹ ಶಾಸಕ ಎಚ್.ವಿಶ್ವನಾಥ್ ನಡುವಿನ ಆರೋಪ-ಪ್ರತ್ಯಾರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ಸಾ.ರಾ.ಮಹೇಶ್ ವಿಚಾರ ನನಗೆ ಗೊತ್ತಿದೆ. ಈ ಕೆಟ್ಟ ರಾಜಕಾರಣಕ್ಕೆ ಭಾಗಿಯಾಗಲಾರೆ ಎಂದು ಸ್ಪೀಕರ್‌ಗೆ ರಾಜೀನಾಮೆ ನೀಡಿರುವುದಾಗಿ ನನಗೆ ತಿಳಿಸಿದ್ದಾರೆ ಎಂದರು.

ಇದೀಗ ಮಹೇಶ್ ಹಾಗೂ ವಿಶ್ವನಾಥ್ ನಡುವೆ ದೇವಸ್ಥಾನದಲ್ಲಿ ಆಣೆ ಪ್ರಮಾಣದ ಚರ್ಚೆ ಆರಂಭವಾಗಿದೆ. ನಾಳೆ ಮಹೇಶ್ ಬೆಂಗಳೂರಿಗೆ ಆಗಮಿಸಿ ರಾಜೀನಾಮೆ ವಾಪಸ್ ಪಡೆಯಲಿದ್ದಾರೆ. ಎಚ್.ವಿಶ್ವನಾಥ್ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಆಣೆ ಪ್ರಮಾಣದಲ್ಲಿ ಯಾವುದೇ ಅರ್ಥ ಇಲ್ಲ ಎಂದು ದೇವೇಗೌಡ ತಿಳಿಸಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಚುನಾವಣಾ ಪ್ರಚಾರ ಕೈಗೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಲ್ಲಿ ಕೆಲಸ ಮಾಡೋಕೆ ಆಯಾ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೆ. ಪಕ್ಷದ ಸೂಚನೆ ಹಿನ್ನೆಲೆಯಲ್ಲಿ ಕನ್ನಡ ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಅವರು ಹೋಗಿರಬಹುದು ಎಂದರು.

ಸುಪ್ರೀಂಕೋರ್ಟ್‌ನಲ್ಲಿ ಏನು ತೀರ್ಪು ಬರುತ್ತೊ ಗೊತ್ತಿಲ್ಲ. ಆದರೆ ಚುನಾವಣೆ ನಡೆದರೆ ಅವರೇ ಅಭ್ಯರ್ಥಿ. ಕಾಂಗ್ರೆಸ್‌ನ ಕೆಲ ಅನರ್ಹ ಶಾಸಕರು ವಾಪಸ್ ಬರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅನರ್ಹ ಶಾಸಕರನ್ನು ವಾಪಸ್ ಕರೆದುಕೊಳ್ಳಲ್ಲ ಎಂದು ಹೇಳಿದ್ದಾರೆ. ಆದರೆ, ಅವರ ಹೈಕಮಾಂಡ್ ಏನು ಹೇಳಿದೆಯೋ ಗೊತ್ತಿಲ್ಲ ಎಂದು ದೇವೇಗೌಡ ಹೇಳಿದರು.

ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲವೆಂದು ಯಡಿಯೂರಪ್ಪ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಹಾಗೇ ಮಾಡೊದಿಲ್ಲ ಎಂಬ ನಂಬಿಕೆಯಿದೆ. 24 ಗಂಟೆಯೊಳಗೆ ಸಾಲಮನ್ನಾ ಮಾಡಬೇಕು ಅಂತ ಅವತ್ತು ಕುಮಾರಸ್ವಾಮಿಗೆ ಯಡಿಯೂರಪ್ಪ ಒತ್ತಾಯಿಸಿದ್ದರು ಎಂದು ಸ್ಮರಿಸಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಬ್ಯಾಂಕುಗಳ ಸಾಲಮನ್ನಾಕ್ಕೆ ಹಣ ಎತ್ತಿಟ್ಟಿದ್ದರು. ಬ್ಯಾಂಕ್‌ನ ಸಾಲ ಬಹುತೇಕ ಪೂರ್ಣವಾಗಿದೆ. ಶೆಡ್ಯುಲ್ಡ್ ಬ್ಯಾಂಕ್ ಸಾಲದ ಬಗ್ಗೆ ಸ್ವಲ್ಪ ಗೊಂದಲಗಳಿವೆ. ನಾನು ಮುಖ್ಯಕಾರ್ಯದರ್ಶಿ ಜೊತೆ ಮಾತನಾಡಿದ್ದೇನೆ. ಸಹಕಾರ ಬ್ಯಾಂಕ್‌ಗಳಲ್ಲಿನ ಸಾಲಮನ್ನಾಗೆ ಇಟ್ಟಿದ್ದ ಹಣದಲ್ಲಿ ಸ್ವಲ್ಪ ಉಳಿದಿದೆ. ಅದನ್ನು ಪ್ರವಾಹ ಪರಿಸ್ಥಿತಿ ನಿಭಾಯಿಸಲು ಬಳಸಿಕೊಳ್ಳಬಹುದು ಎಂದು ದೇವೇಗೌಡ ಹೇಳಿದರು.

ಐಟಿ ದಾಳಿ ವಿಚಾರವಾಗಿ ನನ್ನ ವಿರುದ್ಧ ಕಾಂಗ್ರೆಸ್ ಮಾಜಿ ಶಾಸಕ ರಾಜಣ್ಣ ಮಾಡಿರುವ ಆರೋಪದ ಕುರಿತು ಮಾತನಾಡಿದ ಅವರು, ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ದೇಶದ ಪ್ರಧಾನಿ ಆದವನು ನಾನು, ಐಟಿಗೆ ಪತ್ರ ಬರೆಯೋಕೆ ಆಗುತ್ತಾ? ಪತ್ರ ಬರೆದರೆ ನನ್ನ ವ್ಯಕ್ತಿತ್ವಕ್ಕೆ ನಾನೇ ಕುಂದು ಮಾಡಿಕೊಂಡಂತೆ. ಆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಆದರೆ, ಅವರು ಅಭಿಪ್ರಾಯಪಟ್ಟ್ಟಿರುವಂತೆಯೇ ಸದ್ಯ ದೇಶದ ಆರ್ಥಿಕ ಸ್ಥಿತಿ ಇದೆ. ವಿಶ್ವಬ್ಯಾಂಕ್ ಸೇರಿದಂತೆ ಹಲವು ಸಂಸ್ಥೆಗಳು ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ಎಂದು ಹೇಳಿವೆ ಎಂದರು.

ಪ್ರಧಾನಿ ನರೇಂದ್ರ ಮೋದಿಗೂ ಈ ಸತ್ಯದ ಬಗ್ಗೆ ಅರಿವಿದೆ. ಆದರೆ, ಅವರಿಗೆ 370ನೆ ವಿಧಿ ರದ್ಧತಿಯ ಬಗ್ಗೆಯೇ ಹೆಚ್ಚಿನ ನಂಬಿಕೆಯಿದೆ. ಇದನ್ನೇ ಮುಂದಿಟ್ಟುಕೊಂಡು ಎರಡು ರಾಜ್ಯಗಳ ಚುನಾವಣೆಯನ್ನು ಎದುರಿಸಲು ಹೊರಟಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 370ನೆ ವಿಧಿ ರದ್ಧು ಮಾಡುವ ವಿಧೇಯಕಕ್ಕೆ ಅನುಮೋದನೆ ಸಿಕ್ಕಿದೆ. ಆದರೂ, ಕಾಯ್ದೆಯನ್ನು ಯಾರು ವಾಪಸ್ ತರುತ್ತಾರೆ ಎಂದು ಮೋದಿ ಸವಾಲು ಹಾಕುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಚುನಾವಣೆಗಳಲ್ಲಿ ಸ್ಥಳೀಯ ವಿಚಾರಗಳು ಪ್ರಮುಖವಾಗಿ ಪ್ರಸ್ತಾವಗೊಳ್ಳಬೇಕು. ಆದರೆ, ಈಗ ಅಂತಹ ಯಾವುದೇ ಬೆಳವಣಿಗೆ ನಡೆಯುತ್ತಿಲ್ಲ. ಯಶವಂತಪುರ ಕ್ಷೇತ್ರದ ನಮ್ಮ ಅಭ್ಯರ್ಥಿ ಜವರಾಯಿಗೌಡರು ಉಪ ಚುನಾವಣೆ ನಡೆದರೆ ಜೆಡಿಎಸ್‌ನಿಂದಲೇ ಸ್ಪರ್ಧೆ ಮಾಡುತ್ತಾರೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರ ವ್ಯಕ್ತಿತ್ವಕ್ಕೆ ಕುಂದು ತರುವ ಕೆಲಸ ಮಾಡುತ್ತಿದ್ದಾರೆ. ಅವರು ಬೇರೆ ಪಕ್ಷಕ್ಕೆ ಹೋಗುತ್ತಾರೆಂದು ಸುದ್ದಿ ಹರಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News