ಬಿಜೆಪಿ ಗೆಲ್ಲಿಸಲು ಸಿಎಂ, ಸಚಿವರು ಹೋದರೆ ನೆರೆ ಸಂತ್ರಸ್ತರನ್ನು ನೋಡುವುದು ಯಾರು ?

Update: 2019-10-16 15:49 GMT

ಬೆಂಗಳೂರು, ಅ. 16: ‘ಟ್ರಂಪ್ ಗೆಲ್ಲಿಸಲು ಮೋದಿ ಹೋದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲ್ಲಿಸಲು ಬಿಎಸ್‌ವೈ ಮತ್ತವರ ಸಚಿವರ ತಂಡ ತೆರಳಿದೆ. ಆದರೆ, ರಾಜ್ಯದಲ್ಲಿ ರಾಜ್ಯದ ನೆರೆ ಸಂತ್ರಸ್ತರನ್ನು ನೋಡೋದು ಯಾರು?’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಬುಧವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಸಂತ್ರಸ್ತರ ಬಗ್ಗೆ ಚರ್ಚಿಸಲು ಸಿದ್ಧರಿಲ್ಲ. ಪ್ರಧಾನಿ ಮೋದಿ ಬಳಿ ಹೋಗಿ ಪರಿಹಾರಕ್ಕೆ ಆಗ್ರಹಿಸಲಿಲ್ಲ. ಉಪ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ವೇಳೆ ನಿಗಮ-ಮಂಡಳಿ ಅಧ್ಯಕ್ಷರನ್ನು ನೇಮಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಅನರ್ಹ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುತ್ತಿದ್ದು, ಚುನಾವಣಾ ಆಯೋಗವೇ ದುರುದ್ದೇಶದಿಂದ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕೂಡಲೇ ನಿಗಮ ಮಂಡಳಿ ಅಧ್ಯಕ್ಷರ ನೇಮಕವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ತೇಜೋವಧೆ ಸಲ್ಲ: ಕೆ.ಸಿ. ವೇಣುಗೋಪಾಲ್ ಅವರು ರೌಡಿ ಶೀಟರ್ ಇಷ್ತಿಯಾಕ್ ಅಹ್ಮದ್‌ನನ್ನು ಭೇಟಿ ಮಾಡಿದ್ದಾರೆಂಬುದು ಸರಿಯಲ್ಲ. ಅವರ ಮೇಲಿನ ಪ್ರಕರಣಗಳು ರದ್ದಾಗಿವೆ. ಪಕ್ಷದ ಹಲವು ಸಭೆಗಳಲ್ಲಿ ಅವರು ಪಾಲ್ಗೊಂಡಿದ್ದಾರೆ. ಆದರೆ, ವೇಣುಗೋಪಾಲ್ ರನ್ನು ತೇಜೋವಧೆ ಮಾಡಲಾಗುತ್ತಿದೆ ಎಂದು ದೂರಿದರು.

ಇಷ್ತಿಯಾಕ್ ಅವರ ಹೆಂಡತಿ ಫರೀದಾ ಅವರು ಶಿವಾಜಿನಗರ ವಾರ್ಡ್ ಕಾರ್ಪೋರೇಟರ್ ಆಗಿದ್ದು, ಅವರು ನನ್ನನ್ನು ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಆದರೆ, ಐಎಂಎ ಪ್ರಕರಣದಲ್ಲಿ ಭಾಗಿಯಾಗಿರುವವರು ಬಿಜೆಪಿಯಲ್ಲಿದ್ದಾರೆ. ಆ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಕಿಡಿಕಾರಿದರು.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಸಿಎಂ ಯಡಿಯೂರಪ್ಪ ಮೇಲೆ ಸಾಕಷ್ಟು ಪ್ರಕರಣಗಳಿವೆ. ಹಲವು ರಾಜಕಾರಣಿಗಳ ಮೇಲೆ ಕ್ರಿಮಿನಲ್, ಅತ್ಯಾಚಾರ ಸೇರಿದಂತೆ ಗಂಭೀರ ಸ್ವರೂಪದ ಆರೋಪಗಳಿವೆ ಎಂದ ಅವರು, ದುರುದ್ದೇಶದಿಂದ ಸುದ್ದಿ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

‘ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಅವರು ರಾಜೀನಾಮೆ ನೀಡಿದರೆ ಇದಕ್ಕೆ ನಾವು ಏನು ಮಾಡಲು ಸಾಧ್ಯ. ಬಿಜೆಪಿ ಇದನ್ನು ಕುದುರೆ ವ್ಯಾಪಾರ ಮಾಡಿಕೊಂಡಿದೆ. ಇತರೆ ಪಕ್ಷಗಳ ಮುಖಂಡರನ್ನು ಭಯ ಬೀಳಿಸುತ್ತಿದ್ದು ಪಕ್ಷ ತೊರೆಯುವಂತೆ ಮಾಡುತ್ತಿದೆ. ಬಿಜೆಪಿ ಸೇರುವ ವಾತಾವರಣ ನಿರ್ಮಿಸುತ್ತಿರುವುದು ಸಲ್ಲ’

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News