ಬಿಬಿಎಂಪಿ ಮೇಯರ್ ದಿಢೀರ್ ಭೇಟಿ: ಹಾಜರಾತಿಗೆ ಸಹಿ ಹಾಕದ ಅಧಿಕಾರಿಗಳ ಸಂಬಳ ಕಡಿತಕ್ಕೆ ಸೂಚನೆ

Update: 2019-10-16 16:04 GMT

ಬೆಂಗಳೂರು,ಅ.16: ಜಯನಗರದ ಬಿಬಿಎಂಪಿ ಬೃಹತ್ ನೀರುಗಾಲುವೆ ಕಚೇರಿಗೆ ಮೇಯರ್ ಗೌತಮ್ ಕುಮಾರ್ ಜೈನ್ ಬುಧವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ, ಎಸ್‌ಡಬ್ಲೂಡಿ ಚೀಫ್ ಇಂಜಿನಿಯರ್ ಪ್ರಹ್ಲಾದ್ ಅವರು ಅಕ್ಟೋಬರ್ ತಿಂಗಳಲ್ಲಿ ಒಂದು ದಿನವೂ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿಲ್ಲವೆಂದು ತಿಳಿದು ಸಂಬಳ ಕಡಿತಕ್ಕೆ ಸೂಚಿಸಿದ್ದಾರೆ.

ಸಮಯ 11.45 ಆದರೂ ಕಚೇರಿಗೆ ಬಾರದ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ವಿರುದ್ಧ ಮೇಯರ್ ಕಿಡಿಕಾರಿದ್ದಾರೆ. ಜೊತೆಗೆ ಹಾಜರಾತಿಗೆ ಸಹಿ ಹಾಕದ ಸಿಇ ಪ್ರಹ್ಲಾದ್ ಹಾಗೂ ಮತ್ತಿತರಿಗೆ ಗೈರು ಹಾಕಿ ಸಂಬಳ ಕಡಿತಕ್ಕೆ ಮ್ಯಾನೇಜರ್ ದೀಪಶ್ರೀಗೆ ಸೂಚನೆ ನೀಡಿದರು. ಇಂಜಿನಿಯರ್‌ಗಳು ಕೆಲಸದ ಬಗ್ಗೆ ಫೀಲ್ಡ್ ರಿಪೋರ್ಟ್ ನಿರ್ವಹಿಸದ ಬಗ್ಗೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಮೂವ್‌ಮೆಂಟ್ ರಿಜಿಸ್ಟರ್‌ನಲ್ಲಿ ಸಹಿ ಹಾಕದ ಅಧಿಕಾರಿಗಳಿಗೆ ಒಂದು ವಾರ ಸಂಬಳ ಕಡಿತಕ್ಕೆ ಮೇಯರ್ ಗೌತಮ್ ಕುಮಾರ್ ಜೈನ್ ಸೂಚಿಸಿದ್ದು, ಇಂಜಿನಿಯರ್‌ಗಳು ಕೆಲಸದ ಮೇಲೆ ತೆರಳುವಾಗ ಮೂವ್‌ಮೆಂಟ್ ರಿಜಿಸ್ಟರ್‌ನಲ್ಲಿ ಮಾಹಿತಿ ದಾಖಲಿಸಿ ಸಹಿ ಹಾಕಿ ತೆರಳಬೇಕು ಎಂದು ಆದೇಶಿಸಿದರು. ಜೊತೆಗೆ ಕಚೇರಿ ಅವಧಿಯಲ್ಲಿ ಬಿಬಿಎಂಪಿ ಗುರುತಿನ ಚೀಟಿ ಹಾಕದ ಸಿಬ್ಬಂದಿಗೆ ಮೇಯರ್ ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಮೇಯರ್ ಜಯನಗರ ಕಾಂಪ್ಲೆಕ್ಸ್‌ಗೂ ಭೇಟಿ ನೀಡಿದರು. ಜಯನಗರ ಕಾಂಪ್ಲೆಕ್ಸ್‌ನಲ್ಲಿ ಟಾಯ್ಲೆಟ್ ಸಮಸ್ಯೆ ಇದೆ. ಮೂರು ಲಿಫ್ಟ್ ಪೈಕಿ ಒಂದು ಲಿಫ್ಟ್ ಮಾತ್ರ ಚಾಲ್ತಿಯಲ್ಲಿದೆ ಎಂದು ಅಂಗಡಿ ಮಳಿಗೆಗಳ ಬಾಡಿಗೆದಾರರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಜೊತೆಗೆ ಕಾಂಪ್ಲೆಕ್ಸ್‌ನಲ್ಲಿ ಕುಡಿದ ಬಾಟಲಿ, ಸಿಗರೇಟ್ ಸೇವಿಸಿ ಎಲ್ಲೆಂದರಲ್ಲಿ ಬಿಸಾಡುತ್ತಾರೆ, ಸ್ವಚ್ಛವಾಗಿಡುವುದು ಸಮಸ್ಯೆಯಾಗಿದೆ ಎಂದು ಆರೋಪಿಸಿದರು.

ಈ ನಡುವೆ ವ್ಯಾಪಾರ ಪರವಾನಿಗೆ ಇಲ್ಲದ ಅಂಗಡಿಗಳನ್ನು ಬಂದ್ ಮಾಡುವಂತೆ ಮೇಯರ್ ಆದೇಶ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News