ಮಹಿಳೆಗೆ ಕಿರುಕುಳ ಆರೋಪ: ಸಿಓಡಿ ತನಿಖೆಗೆ ವಿಶ್ವ ಮಾತಾ ಮಹಿಳಾ ಸೇವಾ ಸಂಸ್ಥೆ ಒತ್ತಾಯ

Update: 2019-10-16 17:15 GMT

ಬೆಂಗಳೂರು, ಅ.16: ಹೆಂಡತಿಗೆ ಕಿರುಕುಳ ನೀಡುತ್ತಿರುವ ಗಂಡನ ಮೇಲೆ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಪ್ರಕರಣವನ್ನು ಸಿಓಡಿಗೆ ವಹಿಸಬೇಕು ಎಂದು ವಿಶ್ವ ಮಾತಾ ಮಹಿಳಾ ಸೇವಾ ಸಂಸ್ಥೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷೆ ಮಂಜುಳಾ, ನಗರದ ಮಲ್ಲೇಶ್ವರದ ಕೋದಂಡರಾಮ ಪುರ ನಿವಾಸಿ ಎಂ. ವಿನುತಾ ಎಂಬ ಮಹಿಳೆಗೆ ಆಕೆಯ ಪತಿ ನರೇಂದ್ರ ಬಾಬು ಕಿರುಕುಳ ನೀಡುತ್ತಿದ್ದು, ಈತನ ವಿರುದ್ಧ ದೂರು ನೀಡಿದರೂ, ವೈಯಾಲಿಕಾವಲ್ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಅ.30ರಂದು ಆನಂದರಾವ್ ವೃತ್ತದಲ್ಲಿರುವ ಗಾಂಧೀ ಪ್ರತಿಮೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು. 

ಸಂತ್ರಸ್ತೆ ವಿನುತಾ ಮಾತನಾಡಿ, ನನ್ನ ಗಂಡ(ನರೇಂದ್ರ ಬಾಬು)ನ ಚಿತ್ರ ಹಿಂಸೆ ಹೆಚ್ಚಾಗುತ್ತಿದ್ದು, ಪ್ರಾಣಾಪಾಯ ಎದುರಾಗಿದೆ. ರಕ್ಷಣೆ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಪೊಲೀಸರು ನನ್ನ ಗಂಡನ ಜೊತೆ ಶಾಮೀಲಾಗಿ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ 13 ವರ್ಷಗಳ ಹಿಂದೆ ನರೇಂದ್ರ ಬಾಬು ಜೊತೆ ವಿವಾಹವಾಗಿದ್ದು, ಒಬ್ಬ ಮಗನಿದ್ದಾನೆ. ಮಗು ಹುಟ್ಟಿದ ನಂತರ ಸ್ಥೂಲಕಾಯ ಬಂದಿದ್ದರಿಂದ ನನ್ನ ಗಂಡ ನರೇಂದ್ರ ಬಾಬು ಬೇರೆ ವಿವಾಹವಾಗಲು ತಯಾರಿ ನಡೆಸಿ, ಹಲವು ಬಾರಿ ಪ್ರಾಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಠಾಣೆಗೆ ದೂರು ನೀಡಿದ್ದರೂ, ಅಲ್ಲಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News