ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಶೀಘ್ರದಲ್ಲೇ ಚುನಾವಣೆ

Update: 2019-10-16 17:18 GMT

ಬೆಂಗಳೂರು, ಅ.16: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಅವರು ಸಿದ್ಧತೆ ನಡೆಸಿದ್ದು, ಒಂದೆರಡು ದಿನಗಳಲ್ಲಿ ದಿನಾಂಕ ನಿಗದಿಯಾಗಲಿದೆ.

ಮೇಯರ್- ಉಪಮೇಯರ್ ಚುನಾವಣೆ ಸಂದರ್ಭದಲ್ಲೇ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೂ ಚುನಾವಣೆ ನಡೆಸುವುದನ್ನು ಪ್ರಶ್ನಿಸಿ ಕೆಲವು ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಈ ಕುರಿತಂತೆ ತಾತ್ಕಾಲಿಕ ತಡಯಾಜ್ಞೆ ನೀಡಿತ್ತು.

ಇದರಿಂದ ಡಿಸೆಂಬರ್ ತನಕ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಲಾರದು ಎಂದು ಹಲವು ಸದಸ್ಯರು ತಿಳಿದುಕೊಂಡಿದ್ದರು. ಆದರೆ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ವೇಲು ನಾಯ್ಕರ್ ಅವರು ಮೇಯರ್ ಚುನಾವಣೆ ಸಂದರ್ಭದಲ್ಲಿ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೂ ಚುನಾವಣೆ ನಡೆಸಬೇಕು ಎಂದು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ವೇಲು ನಾಯ್ಕರ್ ಅವರ ಮನವಿ ಕುರಿತು ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರು ವಾದ- ವಿವಾದ ಆಲಿಸಿ ಕೂಡಲೇ ಎಲ್ಲಾ 12 ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಸುವಂತೆ ಪ್ರಾದೇಶಿಕ ಆಯುಕ್ತರು ಹಾಗೂ ರಾಜ್ಯ ಸರಕಾರಕ್ಕೆ ಆದೇಶಿಸಿದ್ದಾರೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಅವರು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News