61 ಎಪಿಪಿಗಳು ಹುದ್ದೆಯಲ್ಲಿ ಇರಲು ಅರ್ಹರೇ ?: ಮಾಹಿತಿ ನೀಡಲು ಹೈಕೋರ್ಟ್ ನಿರ್ದೇಶನ

Update: 2019-10-16 17:23 GMT

ಬೆಂಗಳೂರು, ಅ.16: ನೇಮಕಾತಿಗೆ ಸಂಬಂಧಿಸಿದಂತೆ ಗಂಭೀರ ಸ್ವರೂಪದ ಆರೋಪಗಳನ್ನು ಎದುರಿಸುತ್ತಿರುವ ಹಾಗೂ ಚಾರ್ಚ್‌ಶೀಟ್ ಸಲ್ಲಿಕೆಯಾಗಿರುವ 61 ಮಂದಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಆ ಹುದ್ದೆಯಲ್ಲಿ ಮುಂದುವರಿಯಲು ಅರ್ಹತೆ ಇದೆಯೇ ಎಂಬುದರ ಬಗ್ಗೆ ಸ್ಪಷ್ಟಪಡಿಸುವಂತೆ ರಾಜ್ಯಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಈ ಕುರಿತು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್.ಹಿರೇಮಠ, ವಕೀಲೆ ಸುಧಾ ಕಾಟವಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಚಾರ್ಜ್‌ಶೀಟ್ ಸಲ್ಲಿಕೆಯಾದ ನಂತರವೂ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವ ಮಾನದಂಡದ ಮೇಲೆ ಅವರನ್ನು ಆ ಹುದ್ದೆಗಳಲ್ಲಿ ಮುಂದುವರಿಸಲಾಗಿದೆ ಎಂಬ ಬಗ್ಗೆ ರಾಜ್ಯ ಸರಕಾರ ನ.12ರೊಳಗೆ ಉತ್ತರಿಸಲು ತಿಳಿಸಿ, ವಿಚಾರಣೆಯನ್ನು ಮುಂದೂಡಿತು.

197 ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನೇಮಕಾತಿ ರದ್ದುಗೊಳಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ. ಆದರೆ, ಈ ವಿಷಯಕ್ಕೆ ಬರುವ ಮೊದಲು ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವ 61 ಮಂದಿಯ ಬಗ್ಗೆ ಒಂದು ತೀರ್ಮಾನಕ್ಕೆ ಬರಬೇಕು. ಹೀಗಾಗಿ, ಸರಕಾರ ಇದರ ಬಗ್ಗೆ ಉತ್ತರಿಸಬೇಕೆಂದು ಪೀಠವು ಅಭಿಪ್ರಾಯಪಟ್ಟಿತು. 61 ಮಂದಿ ಗಂಭೀರ ಸ್ವರೂಪದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988 ಸೆಕ್ಷನ್ 197 ಮತ್ತು ಐಪಿಸಿ 201, 409, 465, 468, 471 ಮತ್ತು 420ಮತ್ತಿತರ ಸೆಕ್ಷನ್‌ಗಳಡಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಒಂದು ಕಡೆ ಅವರು ಆರೋಪಗಳನ್ನೂ ಎದುರಿಸುತ್ತಿದ್ದರೆ, ಮತ್ತೊಂದು ಕಡೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾಗಿ ಮುಂದುವರಿದಿದ್ದಾರೆ ಇದು ಹೇಗೆ ಸಾಧ್ಯ ಎಂದು ಸರಕಾರದ ಪರ ವಕೀಲರನ್ನು ಪ್ರಶ್ನಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News