16 ರೀತಿಯ ಹಚ್ಚೆ ಹಾಕಿಸಿ ಕೊಹ್ಲಿ ಮೇಲಿನ ಅಭಿಮಾನ ಮೆರೆದ ಒಡಿಶಾದ ಪಿಂಟು ಬೆಹೆರ

Update: 2019-10-16 18:52 GMT

ಹೊಸದಿಲ್ಲಿ, ಅ.16: ಸುಧೀರ್ ಗೌತಮ್ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್‌ಗೆ ಕಟ್ಟಾ ಅಭಿಮಾನಿ. ಹರಿ ಸರವಣನ್, ಎಂಎಸ್ ಧೋನಿಯ ದೊಡ್ಡ ಬೆಂಬಲಿಗ. ಇದೀಗ ಇವರಿಬ್ಬರ ಸಾಲಿಗೆ ವಿರಾಟ್ ಕೊಹ್ಲಿ ಅಭಿಮಾನಿ ಪಿಂಟು ಬೆಹರ ಸೇರ್ಪಡೆಯಾಗಿದ್ದಾರೆ. ಕೊಹ್ಲಿಗೆ ಬೆಹೆರ ವಿಶಿಷ್ಟವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ತನ್ನ ದೇಹದಲ್ಲಿ ಸುಮಾರು 16 ವಿಭಿನ್ನ ಹಚ್ಚೆಗಳನ್ನು ಹಾಕಿಸಿಕೊಂಡಿರುವ ಅವರು ಎಲ್ಲ ಹಚ್ಚೆಗಳನ್ನು ಭಾರತ ನಾಯಕ ಕೊಹ್ಲಿಗೆ ಅರ್ಪಿಸಿದ್ದಾರೆ.

 ಒಡಿಶಾದ ಬೆಹ್ರಾಂಪುರದಲ್ಲಿ ಸಣ್ಣಪ್ರಮಾಣದ ಗುತ್ತಿಗೆದಾರನಾಗಿರುವ ಬೆಹೆರ 5 ವರ್ಷಗಳಿಂದ ಕೊಹ್ಲಿ ಭೇಟಿಗಾಗಿ ಕಾಯುತ್ತಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಕ್ಕಿಂತ ಮೊದಲು ಬೆಹೆರ ಅವರ ಕನಸೂ ಕೊನೆಗೂ ಈಡೇರಿತು. ಬೆಹೆರ ತನ್ನ ಬೆನ್ನಿನಲ್ಲಿ ವಿರಾಟ್ ಹೆಸರು ಹಾಗೂ ಜೆರ್ಸಿ ನಂಬರ್ 18ನ್ನು ಹಚ್ಚೆ ಹಾಕಿಕೊಂಡಿದ್ದಾರೆ. ಕೊಹ್ಲಿ ಮುಖವಿರುವ ಹಚ್ಚೆ, ಬಿಸಿಸಿಐ ಲೋಗೊ ಹಾಗೂ ವಿರಾಟ್ ಟೆಸ್ಟ್ ಕ್ಯಾಪ್ ನಂಬರ್-269, ವಿರಾಟ್ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಅವರ ಹಚ್ಚೆ, ಐಸಿಸಿ ವಿಶ್ವಕಪ್ ಲಾಂಛನಗಳು(2011, 2015, 2019), ಕೊಹ್ಲಿ ಸ್ವೀಕರಿಸಿದ ರಾಷ್ಟ್ರೀಯ ಪ್ರಶಸ್ತಿಗಳ ಹಚ್ಚೆ ಹಾಕಿಸಿಕೊಂಡಿದ್ದಾರೆ. ‘‘ನಾನು ಹಚ್ಚೆ ಹಾಕಿಸಿಕೊಂಡ ಬಳಿಕ ದೇಹಕ್ಕೆ ಸೋಂಕು ತಗಲಿತ್ತು. ನಾನು ಹಾಕಿದ್ದ ಶಾಯಿ ನನ್ನ ದೇಹಕ್ಕೆ ಒಪ್ಪದೇ ಹೀಗಾಗಿತ್ತು. ಈ ವಿಷಯದಲ್ಲಿ ಮನೆಯವರಿಂದ ಬೈಸಿಕೊಂಡಿದ್ದೆ. ಆದರೆ ಹಚ್ಚೆ ಹಾಕಿಸಿಕೊಳ್ಳುವುದನ್ನು ಮಾತ್ರ ನಿಲ್ಲಿಸಿರಲಿಲ್ಲ’’ ಎಂದು 31ರ ಹರೆಯದ ಬೆಹೆರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News