ಇವಿಎಂ ಅಂದ್ರೆ ಎವೆರಿ ವೋಟ್ ಫಾರ್ ಮೋದಿ !

Update: 2019-10-17 05:38 GMT

ಹೊಸದಿಲ್ಲಿ: ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್)ಗೆ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಹೊಸ ವಿಸ್ತೃತ ರೂಪ ನೀಡಿದ್ದಾರೆ. ವಾಸ್ತವವಾಗಿ ಇವಿಎಂ ಎಂದರೆ "ಎವೆರಿ ವೋಟ್ ಫಾರ್ ಮೋದಿ" ಮತ್ತು "ಎವೆರಿ ವೋಟ್ ಫಾರ್ ಮನೋಹರ್" ಎಂದು ಟ್ವೀಟ್ ಮಾಡಿದ್ದಾರೆ.

ಇವಿಎಂ ಎಂದರೆ ನಿಜವಾಗಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಎಂಬ ಅರ್ಥ. ಯಾವುದೇ ಮತಪತ್ರ ಅಥವಾ ಮತಪೆಟ್ಟಿಗೆಯ ಅಗತ್ಯವಿಲ್ಲದೇ ಮತ ಚಲಾಯಿಸಬಹುದಾದ ಒಂದು ಯಂತ್ರ. ಆದರೆ ಆಡಳಿತ ಪಕ್ಷದ ಮರ್ಜಿಗೆ ಅನುಸಾರವಾಗಿ ಮತಯಂತ್ರದಲ್ಲಿ ಮಾರ್ಪಾಡು ಮಾಡಲಾಗುತ್ತಿದೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಕಳೆದ ಕೆಲ ವರ್ಷಗಳಿಂದ ಮಾಡುತ್ತಿವೆ.

ಚುನಾವಣಾ ರ್ಯಾಲಿಯೊಂದರಲ್ಲಿ ಖಟ್ಟರ್ ಈ ಹೊಸ ವ್ಯಾಖ್ಯಾನ ಮಾಡುತ್ತಿರುವ ವೀಡಿಯೊ ತುಣುಕಿನ ಸಹಿತ ಮಾಡಿದ ಟ್ವೀಟನ್ನು ಆ ಬಳಿಕ ಡಿಲೀಟ್ ಮಾಡಲಾಗಿದೆ. "ಯಂತ್ರದ ಹೆಸರು ಇವಿಎಂ. ಇದನ್ನು ಎವೆರಿ ವೋಟ್ ಫಾರ್ ಮೋದಿ ಎಂದು ವಿಸ್ತರಿಸಬಹುದು. ಆದರೆ ಇದು ರಾಜ್ಯ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆ; ಲೋಕಸಭೆಗೆ ಅಲ್ಲ ಎಂದು ಯಾರಾದರೂ ಹೇಳಿದರೆ, ಅದನ್ನು ಎವೆರಿ ವೋಟ್ ಫಾರ್ ಮನೋಹರ್ ಎಂದು ಮಾರ್ಪಡಿಸಬಹುದು. ಮೋದಿಗಾದರೂ ಮತ ನೀಡಿ; ಮನೋಹರ್‌ಗಾದರೂ ಮತ ನೀಡಿ, ನೀವು ಒತ್ತಬೇಕಾಗಿರುವ ಗುಂಡಿ ಕಮಲದ ಚಿಹ್ನೆ" ಎಂದು ಚುನಾವಣಾ ರ್ಯಾಲಿಯಲ್ಲಿ ಖಟ್ಟರ್ ಹೇಳಿದರು.

"ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ಗಾಂಧಿ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಹುದ್ದೆಗಾಗಿ ದೇಶವಿಡೀ ಹುಡುಕಿತು. ಆದರೆ ಕೊನೆಗೆ ಸೋನಿಯಾ ಗಾಂಧಿಯವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಬೆಟ್ಟ ಅಗೆದು ಇಲಿ ಹಿಡಿದಂತಾಯಿತು; ಅದು ಕೂಡಾ ಸತ್ತ ಇಲಿ" ಎಂದು ಖಟ್ಟರ್ ನೀಡಿರುವ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News