​ಈ ಶಾಲೆಯಲ್ಲಿ ಮಕ್ಕಳಿಗೆ ಅಪ್ಪನ ತರಕಾರಿ, ಅಮ್ಮನ ಅಡುಗೆ !

Update: 2019-10-17 05:27 GMT
ಫೋಟೊ : newindianexpress.com

ರಾಯಪುರ: ಕಳಪೆ ಗುಣಮಟ್ಟದ ಬಿಸಿಯೂಟ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವುದು ಹೊಸದೇನೂ ಅಲ್ಲ. ಆದರೆ ಛತ್ತೀಸ್‌ಗಢದ ಅಂಬಿಕಾಪುರ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿರುವ ಖಾಸಗಿ ಶಾಲೆಯೊಂದು ಬಿಸಿಯೂಟದಲ್ಲಿ ಹೊಸ ಪ್ರಯೋಗ ಮಾಡಿರುವುದು ಸುದ್ದಿಯಾಗಿದೆ.

ಮಕ್ಕಳಿಗೆ ಗುಣಮಟ್ಟದ ಆಹಾರ ಧಾನ್ಯ ಹಾಗೂ ತರಕಾರಿ ತಂದು ಕೊಡುವುದು ಅಪ್ಪಂದಿರ ಕೆಲಸವಾದರೆ, ಶುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸುವುದು ಅಮ್ಮಂದಿಯ ಜವಾಬ್ದಾರಿ.

ಅದಾನಿ ವಿದ್ಯಾ ಮಂದಿರದಲ್ಲಿ 50 ಮಂದಿ ಸಿಬ್ಬಂದಿಯೂ ಸೇರಿದಂತೆ 750 ವಿದ್ಯಾರ್ಥಿಗಳಿಗೆ ವರ್ಷದ 220 ದಿನವೂ ತಾಯಂದಿರ ಕೈರುಚಿ ಸವಿಯುವ ಭಾಗ್ಯ. ಇಲ್ಲಿ ಬಿಸಿಯೂಟವನ್ನು ಯಾವುದೇ ಗುತ್ತಿಗೆದಾರ ಸರಬರಾಜು ಮಾಡುವುದಿಲ್ಲ; ಬದಲಾಗಿ ಯಾರ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೋ ಅವರ ಅಮ್ಮಂದಿರು ಇರುವ ಗ್ರಾಮ ಸಮಿತಿ ಆ ಜವಾಬ್ದಾರಿ ನಿರ್ವಹಿಸುತ್ತದೆ. ಬೇಕಾದ ದವಸ ಧಾನ್ಯ ತರುವುದು, ಅಡುಗೆ ಮಾಡಿ ಬಡಿಸುವುದು ಅವರ ಜವಾಬ್ದಾರಿ.

ಮನೆಯೂಟದ ಸವಿ, ತಾಯಂದಿರ ಅಕ್ಕರೆ ಮತ್ತು ಕಾಳಜಿ ಎಲ್ಲವೂ ಈ ಮಾದರಿಯಲ್ಲಿ ಸೇರಿದೆ. ವಿದ್ಯಾರ್ಥಿಗಳ ಅಪ್ಪಂದಿರೇ ಬೆಳೆದ ಸಾವಯವ ಅಕ್ಕಿ, ಗೋಧಿ ಮತ್ತು ಹಸಿರು ತರಕಾರಿ ಪಾಕಶಾಲೆ ಸೇರುತ್ತದೆ. "ಮಹಿಳಾ ಉದ್ಯಮಿ ಬಹುದ್ದೇಶೀಯ ಸಹಕಾರಿ ಸಮಿತಿ" ಎಂಬ ಸ್ಥಳೀಯ ಸ್ವಸಹಾಯ ಸಂಘ ಉತ್ಪಾದಿಸಿದ ಮಸಾಲೆಯನ್ನೇ ಅಡುಗೆಗೆ ಬಳಸಲಾಗುತ್ತದೆ.

"ಇದೂ ಒಂದು ರೀತಿಯ ಮಹಿಳಾ ಸಬಲೀಕರಣ" ಎಂದು ಸ್ಥಳೀಯ ನಿವಾಸಿ ವೇದಮತಿ ಉಯಿಕೆ ಹೇಳುತ್ತಾರೆ. ರೈತರ ಉತ್ಪನ್ನಗಳಿಗೂ ಇದರಿಂದಾಗಿ ನ್ಯಾಯಯುತ ಬೆಲೆ ಸಿಗುತ್ತಿದೆ ಎಂದು ಅವರು ಹೇಳಿದರು.

ಬೆಳಿಗ್ಗೆ ಉಪಾಹಾರದಲ್ಲಿ ದಾಲಿಯಾ, ಹಲ್ವ, ಪೋಹಾ ಅಥವಾ ಉಪ್ಪಿಟ್ಟು ಮತ್ತು ಹಾಲು ಸೇರಿರುತ್ತದೆ. ವಿಶೇಷ ದಿನಗಳಲ್ಲಿ ಮಕ್ಕಳ ಆಯ್ಕೆಯ ಆಹಾರ ಉಣಬಡಿಸಲಾಗುತ್ತದೆ.

"ಗುಣಮಟ್ಟ ಮತ್ತು ನೈರ್ಮಲ್ಯಕ್ಕೆ ಆದ್ಯತೆ. 2013ರಿಂದೀಚೆಗೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಶಾಲೆ ಬಿಡುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಮಕ್ಕಳ ಪೌಷ್ಟಿಕತೆ ಪ್ರಮಾಣವೂ ಸುಧಾರಿಸಿದೆ. ಅಪೌಷ್ಟಿಕತೆ ಇಲ್ಲಿ ಇಲ್ಲ" ಎಂದು ಶಾಲೆಯ ಪ್ರಾಚಾರ್ಯ ರಜನೀಕಾಂತ್ ಶರ್ಮಾ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News