ಪಿತ್ತಕೋಶದ ಕ್ಯಾನ್ಸರ್‌ನ ಈ ಲಕ್ಷಣಗಳು ನಿಮಗೆ ತಿಳಿದಿರಲಿ

Update: 2019-10-17 14:27 GMT

ಕ್ಯಾನ್ಸರ್‌ನ ಹಲವಾರು ರೂಪಗಳಲ್ಲಿ ಪಿತ್ತಕೋಶದ ಕ್ಯಾನ್ಸರ್ ಒಂದಾಗಿದ್ದು,ಇತರ ಕ್ಯಾನ್ಸರ್‌ಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಕಡಿಮೆ.

ಪಿತ್ತಕೋಶದ ಕ್ಯಾನ್ಸರ್ ಆರಂಭಿಕ ಹಂತಗಳಲ್ಲಿ ಸಂಕೇತಗಳು ಮತ್ತು ಲಕ್ಷಣಗಳನ್ನು ಪ್ರಕಟಿಸುವುದು ಅಪರೂಪ. ಲಕ್ಷಣಗಳು ಕಾಣಿಸಿಕೊಂಡಾಗ ಅವು ಹೆಚ್ಚಿನ ಸಂದರ್ಭದಲ್ಲಿ ಹೆಚ್ಚು ಸಾಮಾನ್ಯವಾದ ಇತರ ಪಿತ್ತಕೋಶ ಸಮಸ್ಯೆಗಳ ಪಿತ್ತಗಲ್ಲುಗಳು ಅಥವಾ ಸೋಂಕುಗಳಂತಹ ಲಕ್ಷಣಗಳನ್ನೇ ಹೋಲುತ್ತವೆ.

ಇಂತಹ ಕೆಲವು ಲಕ್ಷಣಗಳು ಇಲ್ಲಿವೆ:

ಹೊಟ್ಟೆ ನೋವು,ವಾಕರಿಕೆ ಮತ್ತು ವಾಂತಿ,ಕಾಮಾಲೆ,ಹಸಿವು ಕುಂಠಿತ ಅಥವಾ ಶರೀರದ ತೂಕ ನಷ್ಟ,ಪಿತ್ತಕೋಶದ ಗಾತ್ರ ಹೆಚ್ಚುವಿಕೆ,ತೀವ್ರ ತುರಿಕೆ,ಕಂದು ಬಣ್ಣದ ಮೂತ್ರ,ಬಿಳಿಯ ಅಥವಾ ಆವೆಮಣ್ಣಿನ ಬಣ್ಣದ ಮಲವಿಸರ್ಜನೆ ಮತ್ತು ಜ್ವರ. ಜಾಂಡಿಸ್ ಪಿತ್ತರಸ ನಾಳದ ಅತ್ಯಂತ ಸಾಮಾನ್ಯ ಆರಂಭಿಕ ಲಕ್ಷಣವಾಗಿದೆ.

ರೋಗನಿರ್ಧಾರ ಹೇಗೆ?

ಪಿತ್ತಗಲ್ಲುಗಳ ಲಕ್ಷಣಗಳು ಕಂಡುಬಂದಾಗ ತೆಗೆಯಲಾಗುವ ಪಿತ್ತಕೋಶವನ್ನು ಪೆಥಾಲಜಿಸ್ಟ್ ಪರೀಕ್ಷೆಗೊಳಪಡಿಸಿದಾಗ ಹೆಚ್ಚಿನ ಪಿತ್ತಕೋಶ ಕ್ಯಾನ್ಸರ್‌ಗಳು ಪತ್ತೆಯಾಗುತ್ತವೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಪಿತ್ತಕೋಶ ಮತ್ತು ಪಿತ್ತರಸ ನಾಳ ಕ್ಯಾನ್ಸರ್‌ಗಳು ಸಂಬಂಧಿತ ಲಕ್ಷಣಗಳು ಕಾಣಿಸಿಕೊಂಡ ಬಳಿಕವೇ ಪತ್ತೆಯಾಗುತ್ತವೆ. ವೈದ್ಯರು ದೈಹಿಕ ತಪಾಸಣೆಯ ಜೊತೆಗೆ ರೋಗಿಯನ್ನು ಈ ಕೆಳಕಂಡ ಪರೀಕ್ಷೆಗಳಿಗೆ ಒಳಪಡಿಸುತ್ತಾರೆ.

ರಕ್ತಪರೀಕ್ಷೆಗಳು: ಬಿಲಿರುಬಿನ್ ಅಥವಾ ಅಲ್ಕಲೈನ್ ಫಾಸ್ಫೇಟೇಸ್ ಕಿಣ್ವ ಹೆಚ್ಚಿನ ಮಟ್ಟದಲ್ಲಿವೆಯೇ ಎನ್ನುವುದನ್ನು ತಿಳಿದುಕೊಳ್ಳಲು ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಅಲ್ಟ್ರಾಸೌಂಡ್: ಜಾಂಡಿಸ್ ಪೀಡಿತ ರೋಗಿಗಳ ಸ್ಥಿತಿಯನ್ನು ತಿಳಿದುಕೊಳ್ಳಲು ನಡೆಸುವ ಮೊದಲ ಪರೀಕ್ಷೆಗಳಲ್ಲೊಂದಾಗಿರುವ ಅಲ್ಟ್ರಾಸೌಂಡ್ ಪಿತ್ತಗಲ್ಲುಗಳು ಮತ್ತು ಪಿತ್ತರಸ ನಾಳಗಳಲ್ಲಿಯ ಅಡೆತಡೆಗಳನ್ನು ನಿರ್ಧರಿಸುವಲ್ಲಿ ವಿಶೇಷವಾಗಿ ನೆರವಾಗುತ್ತದೆ. ಅದು ಪಿತ್ತಕೋಶದಲ್ಲಿ ಗಡ್ಡೆಗಳ ಇರುವಿಕೆ ಮತ್ತು ಅವುಗಳ ವಿಸ್ತಾರವನ್ನೂ ತೋರಿಸಬಲ್ಲದು.

 ಸಿಟಿ ಸ್ಕಾನ್: ಇದು ಪಿತ್ತರಸ ನಾಳ,ದುಗ್ಧಗ್ರಂಥಿಗಳು ಅಥವಾ ಯಕೃತ್ತಿಗೆ ಕ್ಯಾನ್ಸರ್ ಕೋಶಗಳು ಹರಡಿವೆಯೇ ಎನ್ನುವುದನ್ನು ನಿರ್ಧರಿಸಲು ನೆರವಾಗುತ್ತದೆ.

ಎಂಆರ್‌ಐ: ಈ ಪರೀಕ್ಷೆಯು ಚಿತ್ರಗಳನನ್ನು ತೆಗೆಯಲು ಶಕ್ತಿಶಾಲಿ ಕಾಂತೀಯ ಕ್ಷೇತ್ರ ಮತ್ತು ರೇಡಿಯೊ ತರಂಗಗಳನ್ನು ಬಳಸಿಕೊಳ್ಳುತ್ತದೆ ಮತ್ತು ಪಿತ್ತರಸದ ಹರಿವಿಗೆ ಅಡ್ಡಿಯುಂಟಾಗಿದೆಯೇ ಅಥವಾ ಗಡ್ಡೆಯು ಯಕೃತ್ತನ್ನು ಆಕ್ರಮಿಸಿಕೊಂಡಿದೆಯೇ ಎನ್ನುವುದನ್ನು ನಿರ್ಧರಿಸಲು ನೆರವಾಗುತ್ತದೆ.

ಇಆರ್‌ಸಿಪಿ: ಪಿತ್ತರಸ ನಾಳಗಳಲ್ಲಿ ವ್ಯತ್ಯಯ ಮತ್ತು ಅದಕ್ಕೆ ಕಾರಣಗಳನ್ನು ಕಂಡುಕೊಳ್ಳಲು ಇದು ಅತ್ಯಂತ ಸೂಕ್ತ ಪರೀಕ್ಷೆಯಾಗಿದೆ. ಇದು ರೋಗನಿರ್ಧಾರವನ್ನು ಖಚಿತ ಪಡಿಸಿಕೊಳ್ಳಲು ಬಯಾಪ್ಸಿಯನ್ನು ನಡೆಸಲೂ ಅವಕಾಶವನ್ನು ನೀಡುತ್ತದೆ.

ಲ್ಯಾಪರೋಸ್ಕೋಪಿ: ಇದನ್ನು ಹೆಚ್ಚಾಗಿ ಕ್ಯಾನ್ಸರ್ ಎಷ್ಟು ಹರಡಿದೆ ಎನ್ನುವುದನ್ನು ತಿಳಿದುಕೊಳ್ಳಲು ನಡೆಸಲಾಗುತ್ತದೆ.

ಬಯಾಪ್ಸಿ: ಬಯಾಪ್ಸಿಯಲ್ಲ್ಲಿ ಅಂಗಾಂಶದ ಸಣ್ಣ ಸ್ಯಾಂಪಲ್‌ನ್ನು ತೆಗೆದುಕೊಂಡು ಕ್ಯಾನ್ಸರ್ ಕೋಶಗಳಿಗಾಗಿ ಸೂಕ್ಷ್ಮದರ್ಶಕದಡಿ ಪರೀಕ್ಷಿಸಲಾಗುತ್ತದೆ. ಕ್ಯಾನ್ಸರ್‌ನ ಖಚಿತ ರೋಗನಿರ್ಧಾರಕ್ಕಾಗಿ ಇದು ಏಕೈಕ ಮಾರ್ಗವಾಗಿದೆ.

ಪಿತ್ತಕೋಶ ಕ್ಯಾನ್ಸರ್‌ಗೆ ಚಿಕಿತ್ಸೆ ಹೇಗೆ?

ಈ ವಿಧದ ಕ್ಯಾನ್ಸರ್‌ಗೆ ಚಿಕಿತ್ಸೆಯು ಕ್ಯಾನ್ಸರ್‌ನ ಸ್ವರೂಪ ಮತ್ತು ಹಂತದ ಜೊತೆಗೆ ರೋಗಿಯ ವಯಸ್ಸು ಮತ್ತು ಒಟ್ಟಾರೆ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಕ್ಯಾನ್ಸರ್‌ನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವದು ಚಿಕಿತ್ಸೆಯ ಗುರಿಯಾಗಿದ್ದರೂ ಹೆಚ್ಚಿನ ಸಲ ಅದು ಸಾಧ್ಯವಾಗುವುದಿಲ್ಲ ಮತ್ತು ಕ್ಯಾನ್ಸರ್‌ಗೆ ಕಾರಣವಾಗುವ ಲಕ್ಷಣಗಳಿಗೆ ಚಿಕಿತ್ಸೆ ಅಥವಾ ಕ್ಯಾನ್ಸರ್ ಗಡ್ಡೆಯು ಇನ್ನಷ್ಟು ಹಾನಿಯನ್ನುಂಟು ಮಾಡದಂತೆ ಗಮನ ನೀಡುವುದಕ್ಕೆ ಚಿಕಿತ್ಸೆಯು ಸೀಮಿತವಾಗುತ್ತದೆ.

ಪಿತ್ತಕೋಶ ಕ್ಯಾನ್ಸರ್ ಇದ್ದಾಗ ಪಿತ್ತಕೋಶವನ್ನು ತೆಗೆಯುವುದು ರೋಗಿಯ ಪಾಲಿಗೆ ಹೆಚ್ಚಿನ ನೆಮ್ಮದಿಯನ್ನುಂಟು ಮಾಡುತ್ತದೆ. ಗಡ್ಡೆಯು ಅತ್ಯಂತ ಸಣ್ಣದಿದ್ದರೆ ಮತ್ತು ಪಿತ್ತಕೋಶದ ಅಂಗಾಂಶಗಳಲ್ಲಿ ಆಳವಾಗಿ ಹರಡಿಕೊಂಡಿರದಿದ್ದರೆ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಪಿತ್ತಕೋಶವನ್ನು ಮಾತ್ರ ತೆಗೆಯಬಹುದು. ಕ್ಯಾನ್ಸರ್ ಹೆಚ್ಚು ಹರಡಿದ್ದರೆ ಯಕೃತ್ತಿನ ಕೆಲವು ಅಂಗಾಶಗಳು ಮತ್ತು ಸಮೀಪದ ದುಗ್ಧಗ್ರಂಥಿಗಳನ್ನೂ ಪಿತ್ತಕೋಶದ ಜೊತೆಗೆ ತೆಗೆಯಬಹುದು.

ಪಿತ್ತರಸ ನಾಳದ ಕ್ಯಾನ್ಸರ್ ಇರುವವರಿಗೆ ಶಸ್ತ್ರಚಿಕಿತ್ಸೆ ಅತ್ಯುತ್ತಮವಾಗಿದೆ ಆದರ ಅದು ಕ್ಯಾನ್ಸರ್ ಎಲ್ಲಿದೆ ಮತ್ತು ಎಷ್ಟು ಹರಡಿದೆ ಎನ್ನುವುದನ್ನು ಅವಲಂಬಿಸಿರುತ್ತದೆ.

ತೊಂದರೆಗಳು: ಪಿತ್ತರಸ ನಾಳದಲ್ಲಿ ತಡೆಯನ್ನುಂಟು ಮಾಡುವ ಟ್ಯೂಮರ್ ನೋವು,ಜಾಂಡಿಸ್,ವಾಕರಿಕೆ ಮತ್ತು ವಾಂತಿಯನ್ನುಂಟು ಮಾಡಬಹುದು.ಮೇದೋಜ್ಜೀರಕ ನಾಳವು ಸಣ್ಣ ಕರುಳನ್ನು ಪ್ರವೇಶಿಸುವಲ್ಲಿ ಟ್ಯೂಮರ್‌ಗಳಿದ್ದರೆ ಅವು ಆಹಾರವು ಸಣ್ಣಕರುಳನ್ನು ಪ್ರವೇಶಿಸುವುದನ್ನು ತಡೆಯಬಹುದು. ಮೇದೋಜ್ಜೀರಕ ಕಿಣ್ವಗಳ ಹರಿವನ್ನು ಪ್ರತಿಬಂಧಿಸುವ ಮೂಲಕ ಟ್ಯೂಮರ್‌ಗಳು ಆಹಾರದ ಪಚನ ಮತ್ತು ಪೋಷಕಾಂಶಗಳ ಹೀರುವಿಕೆಯನ್ನು ಕಠಿಣಗೊಳಿಸಬಹುದು. ಸ್ಥಾನಾಂತರವು ಪಿತ್ತರಸ ನಾಳ ಕ್ಯಾನ್ಸರ್‌ನ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಈ ಕ್ಯಾನ್ಸರ್‌ನ ಲಕ್ಷಣಗಳು ಆರಂಭದಲ್ಲಿ ಗೋಚರಿಸುವುದು ಅಪರೂಪ ಮತ್ತು ವಿಳಂಬವಾಗಿ ಗೋಚರಿಸುವ ಹೊತ್ತಿಗೆ ಕ್ಯಾನ್ಸರ್ ಯಕೃತ್ತು,ಜಠರ,ಮೇದೋಜ್ಜಿರಕ ಗ್ರಂಥಿ,ಕರುಳು ಮತ್ತು ದುಗ್ಧ ಗ್ರಂಥಿಗಳಂತಹ ಇತರ ಅಂಗಗಳಿಗೆ ಹರಡಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News