ಸಾವರ್ಕರ್ ಬದಲು ಗೋಡ್ಸೆಗೆ ‘ಭಾರತ ರತ್ನ’ ನೀಡಬಾರದೇಕೆ ?: ಮನೀಷ್ ತಿವಾರಿ ವ್ಯಂಗ್ಯ

Update: 2019-10-17 15:34 GMT

ಹೊಸದಿಲ್ಲಿ, ಅ. 17: “ಸಾವರ್ಕರ್ ಬದಲು ನಾಥುರಾಮ್ ಗೋಡ್ಸೆಗೆ ‘ಭಾರತ ರತ್ನ’ ಪ್ರಶಸ್ತಿ ನೀಡಬಾರದೇಕೆ ?” ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ವ್ಯಂಗ್ಯವಾಡಿದ್ದಾರೆ.

ಮಹಾರಾಷ್ಟ್ರ ವಿಧಾನ ಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ಸಾವರ್ಕರ್‌ಗೆ ಭಾರತ ರತ್ನ ಪ್ರಶಸ್ತಿ ನೀಡುವ ಬಗ್ಗೆ ಬಿಜೆಪಿ ಪ್ರಸ್ತಾಪಿಸಿತ್ತು. ಇದಕ್ಕೆ ತಿವಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾವರ್ಕರ್ ಮಹಾತ್ಮ ಗಾಂಧಿ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪಕ್ಕೆ ಮಾತ್ರ ಒಳಗಾಗಿದ್ದಾರೆ. ಆದರೆ, ನಾಥುರಾಮ್ ಗೋಡ್ಸೆ ಗಾಂಧೀಜಿ ಅವರ ಹತ್ಯೆಗೈದಿದ್ದಾನೆ. ಈ ವರ್ಷ ನಾವು ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಆಚರಿಸುತ್ತಿದ್ದೇವೆ. ಎನ್‌ಡಿಎ ಸರಕಾರ ಸಾವರ್ಕರ್‌ಗೆ ‘ಭಾರತ ರತ್ನ’ ನೀಡುವುದಕ್ಕಿಂತ, ನಾಥುರಾಮ್ ಗೋಡ್ಸೆಗೆ ನೀಡಬಹುದಲ್ಲವೇ ಎಂದು ತಿವಾರಿ ನಾಗಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಪ್ರಶ್ನಿಸಿದರು.

ಸಾವರ್ಕರ್‌ಗೆ ಭಾರತ ರತ್ನ ಪ್ರಧಾನಿಸಲು ಪ್ರಸ್ತಾಪಿಸಿರುವುದಕ್ಕೆ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಈಗಾಗಲೇ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾಥೂರಾಮ್ ಗೋಡ್ಸೆ ಈ ಸಾಲಿನ ಮುಂದಿನ ಹೆಸರು ಆಗಿರಬಹುದು ಎಂದು ಅವರು ಹೇಳಿದ್ದರು. ಪ್ರತಿಯೊಬ್ಬರಿಗೂ ಸಾವರ್ಕರ್ ಅವರ ಇತಿಹಾಸ ಗೊತ್ತಿದೆ. ಸಾವರ್ಕರ್ ಗಾಂಧಿ ಹತ್ಯೆ ಆರೋಪಕ್ಕೆ ಒಳಗಾಗಿದ್ದರು. ಪುರಾವೆಗಳ ಕೊರತೆಯಿಂದ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಇಂದು ಸರಕಾರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುತ್ತೇನೆ ಎಂದು ಹೇಳುತ್ತಿದೆ. ನನಗೆ ಭೀತಿಯಾಗುತ್ತಿದೆ. ಯಾಕೆಂದರೆ ಮುಂದಿನ ಸರದಿ ಗೋಡ್ಸೆ ಆಗಿರಬಹುದು ಎಂದು ಅಲ್ವಿ ಹೇಳಿದ್ದಾರೆ.

 ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News