ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ಮೊದಲ ಸ್ಥಾನ

Update: 2019-10-17 16:06 GMT

 ಹೊಸದಿಲ್ಲಿ,ಅ.17: ಇದೇ ಮೊದಲ ಬಾರಿಗೆ ಸಿದ್ಧಗೊಳಿಸಲಾಗಿರುವ ಅಖಿಲ ಭಾರತ ಆವಿಷ್ಕಾರ ಸೂಚಿ-2019ರಲ್ಲಿ ಕರ್ನಾಟಕವು ಅಗ್ರ ಸ್ಥಾನದಲ್ಲಿದೆ. ತಮಿಳುನಾಡು ಮತ್ತು ಮಹಾರಾಷ್ಟ್ರ ನಂತರದ ಸ್ಥಾನಗಳಲ್ಲಿದ್ದರೆ, ಬಿಹಾರ,ಜಾರ್ಖಂಡ್ ಮತ್ತು ಛತ್ತೀಸ್‌ಗಡ ರಾಜ್ಯಗಳು ಪಟ್ಟಿಯಲ್ಲಿ ಅತ್ಯಂತ ಕೆಳಗಿನ ಸ್ಥಾನಗಳಲ್ಲಿವೆ.

ಜಾಗತಿಕ ಆವಿಷ್ಕಾರ ಸೂಚಿಯ ಮಾದರಿಯಲ್ಲಿ ಸಿದ್ಧಗೊಳಿಸಲಾಗಿರುವ ಭಾರತ ಆವಿಷ್ಕಾರ ಸೂಚಿ-2019 ಪ್ರದೇಶಗಳಾದ್ಯಂತ ಆವಿಷ್ಕಾರ ಅಭಿಯಾನವನ್ನು ಉತ್ತೇಜಿಸಲು ನೀತಿಗಳನ್ನು ರೂಪಿಸುವಲ್ಲಿ ಸರಕಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯ ಆವಿಷ್ಕಾರಕ್ಕೆ ಪೂರಕ ವಾತಾವರಣವನ್ನು ವಿಶ್ಲೇಷಿಸುತ್ತದೆ.

ಸೂಚಿ ವರದಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ ಕುಮಾರ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ಅವರು ಗುರುವಾರ ಇಲ್ಲಿ ಬಿಡುಗಡೆಗೊಳಿಸಿದರು.

ಪ್ರಮುಖ ರಾಜ್ಯಗಳು,ಈಶಾನ್ಯ ಭಾರತ ಮತ್ತು ಗುಡ್ಡಗಾಡು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು/ನಗರ ಮತ್ತು ಸಣ್ಣ ರಾಜ್ಯಗಳು ಹೀಗೆ ಮೂರು ವಿಭಾಗಗಳಲ್ಲಿ ಸೂಚಿಯನ್ನು ಸಿದ್ಧಪಡಿಸಲಾಗಿದೆ.

ಈಶಾನ್ಯ ಭಾರತ ವಿಭಾಗದಲ್ಲಿ ಸಿಕ್ಕಿಂ ಅಗ್ರಸ್ಥಾನದಲ್ಲಿದ್ದರೆ,ಕೇಂದ್ರಾಡಳಿತ ಪ್ರದೇಶ ವಿಭಾಗದಲ್ಲಿ ದಿಲ್ಲಿಗೆ ಈ ಹೆಗ್ಗಳಿಕೆ ಲಭಿಸಿದೆ.

ತೆಲಂಗಾಣ,ಹರ್ಯಾಣ,ಕೇರಳ,ಉತ್ತರ ಪ್ರದೇಶ,ಪಶ್ಚಿಮ ಬಂಗಾಳ,ಗುಜರಾತ್ ಮತ್ತು ಆಂಧ್ರಪ್ರದೇಶ ಆವಿಷ್ಕಾರ ಸೂಚಿಯಲ್ಲಿ ಮೇಲಿನ ಸ್ಥಾನಗಳಲ್ಲಿರುವ ಇತರ ರಾಜ್ಯಗಳಲ್ಲಿ ಸೇರಿವೆ.

ಹೂಡಿಕೆಗೂ ಕರ್ನಾಟಕವೇ ಬೆಸ್ಟ್

ಹೂಡಿಕೆಗಳನ್ನು ಆಕರ್ಷಿಸುವ ವಿಷಯದಲ್ಲಿಯೂ ಕರ್ನಾಟಕವು ಪ್ರಮುಖ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ,ಹರ್ಯಾಣ,ಕೇರಳ,ತಮಿಳುನಾಡು,ಗುಜರಾತ್,ತೆಲಂಗಾಣ,ರಾಜಸ್ಥಾನ ಮತ್ತು ಉತ್ತರ ಪ್ರದೇಶ ನಂತರದ ಸ್ಥಾನಗಳಲ್ಲಿವೆ.

ಹೂಡಿಕೆಯಲ್ಲಿ ಬಿಹಾರ,ಜಾರ್ಖಂಡ್ ಮತ್ತು ಪಂಜಾಬ್ ಕನಿಷ್ಠ ಆಕರ್ಷಣೆಯ ರಾಜ್ಯಗಳಾಗಿವೆ.

ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳ ಪೈಕಿ ಮಣಿಪುರ,ಅರುಣಾಚಲ ಪ್ರದೇಶ ಮತ್ತು ತ್ರಿಪುರಾ ಮೊದಲ ಮೂರು ಅಗ್ರ ರಾಜ್ಯಗಳಾಗಿದ್ದರೆ,ಲಕ್ಷದ್ವೀಪ,ದಿಲ್ಲಿ ಮತ್ತು ಗೋವಾ ಅತ್ಯುತ್ತಮ ಮೂರು ಕೇಂದ್ರಾಡಳಿತ ಪ್ರದೇಶಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News