ಅಜ್ಮಾನ್‌: ತುಂಬೆ ಆಸ್ಪತ್ರೆಯ 17ನೇ ವರ್ಷಾಚರಣೆ

Update: 2019-10-17 17:27 GMT

ದುಬೈ: ತುಂಬೆ ಗ್ರೂಪ್ ತನ್ನ ಆರೋಗ್ಯ ಸೇವೆ ವಿಭಾಗದ ಅಡಿಯಲ್ಲಿ ಸ್ಥಾಪಿಸಿರುವ ಮೊದಲ ಶೈಕ್ಷಣಿಕ ಆಸ್ಪತ್ರೆಯಾದ ಅಜ್ಮಾನ್‌ನ ತುಂಬೆ ಹಾಸ್ಪಿಟಲ್ ಗುರುವಾರ ತನ್ನ 17 ವರ್ಷವನ್ನು ಸಂಭ್ರಮದಿಂದ ಆಚರಿಸಿತು.

ಈ ಸಂದರ್ಭ ಮಾತನಾಡಿದ ತುಂಬೆ ಸಮೂಹದ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯ್ದಿನ್, ಅಜ್ಮಾನ್‌ನ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ತರಬೇತಿ ಸೌಲಭ್ಯ ನೀಡುವ ಉದ್ದೇಶದೊಂದಿಗೆ ಅಜ್ಮಾನ್‌ನಲ್ಲಿ ತುಂಬೆ ಆಸ್ಪತ್ರೆ ಸ್ಥಾಪಿಸಲಾಗಿತ್ತು. ಆದರೆ, ಇಂದು ಇದು ಯುಎಇಯ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದಾಗಿ ಬೆಳೆದು ನಿಂತಿದೆ. ಅಲ್ಲದೆ ಈ ವಲಯದ ಜನಪ್ರಿಯ ವೈದ್ಯಕೀಯ ಪ್ರವಾಸದ ಕೇಂದ್ರವಾಗಿ ಮಾರ್ಪಟ್ಟಿದೆ ಎಂದರು.

ಸಣ್ಣ ಆಸ್ಪತ್ರೆಯಾಗಿ ಆರಂಭಗೊಂಡ ಈ ಆಸ್ಪತ್ರೆ ಇಂದು ಯುಎಇ ಹಾಗೂ ಭಾರತದಾದ್ಯಂತ ಅಸ್ತಿತ್ವ ಹೊಂದುವ ಮೂಲಕ ತುಂಬೆ ಆಸ್ಪತ್ರೆ ಜಾಲವಾಗಿ ಬೆಳೆದಿದೆ. ಮೂರು ಜಾಗತಿಕ ಗುಣಮಟ್ಟದ ಆಸ್ಪತ್ರೆಗಳಾದ ತುಂಬೆ ವಿಶ್ವವಿದ್ಯಾನಿಲಯ ಆಸ್ಪತ್ರೆ, ತುಂಬೆ ಫಿಸಿಕಲ್ ತೆರಪಿ ಹಾಗೂ ಪುನರ್ವಸತಿ ಆಸ್ಪತ್ರೆ, ತುಂಬೆ ದಂತ ವೈದ್ಯಕೀಯ ಆಸ್ಪತ್ರೆಯೊಂದಿಗೆ ಅಜ್ಮಾನ್‌ನಲ್ಲಿ ತುಂಬೆ ಮೆಡಿಸಿಟಿ ಆರಂಭಿಸುವ ಮೂಲಕ ತುಂಬೆ ಸಮೂಹ ಆರೋಗ್ಯ ಸೇವೆ, ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ನಿರಂತರ ಶ್ರೇಷ್ಠತೆಯನ್ನು ಅನ್ವೇಷಿಸುತ್ತಾ ಇನ್ನೊಂದು ಮೈಲುಗಲ್ಲು ಸ್ಥಾಪಿಸಿದೆ ಎಂದರು.

ತುಂಬೆ ಸಮೂಹದ ಆರೋಗ್ಯ ಸೇವೆ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ ಮಾತನಾಡಿ, ಸ್ಥಾಪನೆಗೊಂಡ 17 ವರ್ಷಗಳ ಬಳಿಕವೂ ಅಜ್ಮಾನ್‌ನ ತುಂಬೆ ಆಸ್ಪತ್ರೆ ವಿಶ್ವದಾದ್ಯಂತದ ರೋಗಿಗಳನ್ನು ಸೆಳೆಯುತ್ತಿರುವ ದೇಶದ ಪ್ರಮುಖ ಆಸ್ಪತ್ರೆಯಾಗಿದೆ. ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಪದವೀಧರರಿಗೆ ಕ್ಲಿನಿಕಲ್ ತರಬೇತಿ ನೀಡುವ ಪ್ರಮುಖ ಸೌಲಭ್ಯವನ್ನು ಈ ಆಸ್ಪತ್ರೆ ಹೊಂದಿದೆ. ಇದು ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಆರೋಗ್ಯ ವ್ಯವಸ್ಥೆಯ ಒಂದು ಭಾಗವಾಗಿರುವ ಈ ಆಸ್ಪತ್ರೆ ಇದು ವಿಸ್ತೃತವಾಗಿ ಬೆಳೆಯುತ್ತಿದೆ ಹಾಗೂ ತುಂಬೆ ಸಮೂಹದ ಆರೋಗ್ಯ ಸೇವೆ ವಿಭಾಗದ ಅಡಿಯಲ್ಲಿ ಹೆಚ್ಚು ಪ್ರತಿಷ್ಠಿತ ಆಸ್ಪತ್ರೆಯಾಗಿದೆ. ಕಳೆದ 17 ವರ್ಷಗಳ ಈ ಪ್ರಯಾಣಕ್ಕೆ ಸಹಕರಿಸಿದ ಎಲ್ಲರಿಗೂ ನಾನು ಚಿರ ಋಣಿಯಾಗಿದ್ದೇನೆ ಎಂದರು.

ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಹೊಸ್ಸಾಮ್ ಹಂಮ್ದಿ, ಅಜ್ಮಾನ್‌ನ ತುಂಬೆ ಆಸ್ಪತ್ರೆಯ ಮುಖ್ಯ ನಿರ್ವಹಣಾ ಅಧಿಕಾರಿ ಮುಹಮ್ಮದ್ ಅಬುಫಾರ, ಆಸ್ಪತ್ರೆಯ ಆಡಳಿತ ತಂಡದ ಸದಸ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News