2.40 ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಗೆ ಮಾಜಿ ಸಚಿವ ಕೃಷ್ಣಬೈರೇಗೌಡ ಚಾಲನೆ

Update: 2019-10-18 16:13 GMT

ಬೆಂಗಳೂರು, ಅ.18: ಬ್ಯಾಟರಾಯನಪುರ ಕ್ಷೇತ್ರದ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಜಾಲದಿಂದ ಮಾರನಾಯಕನಹಳ್ಳಿ ಮಾರ್ಗವಾಗಿ ಉತ್ತನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಮಾಜಿ ಸಚಿವ ಕೃಷ್ಣಭೈರೇಗೌಡ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಚಿಕ್ಕಜಾಲದಿಂದ ಮಾರನಾಯಕನಹಳ್ಳಿ ಮಾರ್ಗವಾಗಿ ಉತ್ತನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ಕಿರಿದಾಗಿತ್ತು. ಜೊತೆಗೆ ದಿನ ಕಳೆದಂತೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದಾಗಿ ರಸ್ತೆ ಹದಗೆಟ್ಟು, ಈ ರಸ್ತೆಯಲ್ಲಿ ವಾಹನ ಸಂಚಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಿಟ್ಟಿನಲ್ಲಿ ಇಂದು ವಿಶೇಷ ಅನುದಾನದಡಿ 2.40 ಕೋಟಿ ರೂ. ಅಂದಾಜು ವೆಚ್ಚದಲ್ಲಿ ದ್ವಿಪಥ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ದಿನ ಕಳೆದಂತೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವೆಡೆ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದ ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲವಾಗಲಿದೆ. ಕಾಮಗಾರಿ ನಡೆಯುವ ವೇಳೆಯಲ್ಲಿ ಸಂಚಾರಕ್ಕೆ ತೊಂದರೆಯಾಗುವುದು ಸಹಜ. ಜನತೆ ಇದಕ್ಕೆ ಸಹಕರಿಸಬೇಕು. ಕಾಮಗಾರಿ ಮುಗಿದ ಬಳಿಕ ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಯಾವುದೇ ರಾಜಿ ಇಲ್ಲ: ರಸ್ತೆ ನಿರ್ಮಾಣ ಮಾಡಿದ ಬಳಿಕ ಹಲವಾರು ವರ್ಷಗಳ ಕಾಲ ಗುಣಮಟ್ಟದಿಂದ ಇರಬೇಕು. ಕಾಮಗಾರಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಹೀಗಾಗಿ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಅವರು ಸೂಚಿಸಿದರು. ಕಾರ್ಯಕ್ರಮದಲ್ಲಿ ಬ್ಯಾಟರಾಯನಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಗೋಪಾಲ ಗೌಡ, ತಾ.ಪಂ.ಸದಸ್ಯ ಉದಯ್ ಕುಮಾರ್, ಬೆಂಗಳೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್, ಜಿ.ಪಂ.ಮಾಜಿ ಸದಸ್ಯ ಅಶೋಕನ್ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News