ಆ್ಯಂಬಿಡೆಂಟ್, ಇಂಜಾಜ್ ಕಂಪೆನಿ ವಂಚನೆ ಪ್ರಕರಣ: ಅ.30ರೊಳಗೆ ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ಆದೇಶ

Update: 2019-10-18 16:15 GMT

ಬೆಂಗಳೂರು, ಅ.18: ಆ್ಯಂಬಿಡೆಂಟ್ ಹಾಗೂ ಇಂಜಾಜ್ ಕಂಪೆನಿಗಳಿಂದ ಹೂಡಿಕೆದಾರರಿಗೆ ವಂಚನೆ ಪ್ರಕರಣ ಸಂಬಂಧ ಅ.30ರೊಳಗೆ ಪುನಃ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ.

ಈ ಕುರಿತು ಸಿಬಿಐ ತನಿಖೆ ಕೋರಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಪ್ರಕರಣ ಸಂಬಂಧ ಸೆ.16ರಂದು ಹೈಕೋರ್ಟ್ ನೀಡಿದ ಆದೇಶವನ್ನು ಪಾಲಿಸುವಲ್ಲಿ ಸರಕಾರ ವಿಫಲವಾಗಿದೆ. ಈಗಾಗಲೇ ಸಲ್ಲಿಸಿರುವ ಪ್ರಮಾಣ ಪತ್ರ ಸಮಾಧಾನಕರವಾಗಿಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು. ಅಲ್ಲದೆ, ಈಗಾಗಲೇ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಕೋರ್ಟ್ ಕೇಳಿದ್ದ ಮಾಹಿತಿಯಲ್ಲೂ ಕೊರತೆಯಿದೆ. ಇವುಗಳ ಹೊರತುಪಡಿಸಿ, ಪ್ರಕರಣ ಸಂಬಂಧ ಕೈಗೊಳ್ಳಲಾದ ಸಂಪೂರ್ಣ ವಿವರಗಳೊಂದಿಗೆ ಪ್ರಮಾಣ ಪತ್ರ ಸಲ್ಲಿಸಲು ನ್ಯಾಯಪೀಠವು ಆದೇಶ ಹೊರಡಿಸಿತು.

ಪ್ರಕರಣದ ಹಿನ್ನೆಲೆ: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೂ ಮೊದಲ ಕೆಲ ಬಹುಕೋಟಿ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿತ್ತು. ಅವುಗಳ ಪೈಕಿ ಆ್ಯಂಬಿಡೆಂಟ್ ಹಾಗೂ ಇಂಜಾಜ್ ವಂಚನೆ ಪ್ರಕರಣಗಳೂ ಸದ್ದು ಮಾಡಿದ್ದು, ರಾಜ್ಯ ತನಿಖಾ ಸಂಸ್ಥೆಗಳು ಈ ಪ್ರಕರಣಗಳ ತನಿಖೆಯನ್ನು ಮಾಡುತ್ತಿವೆ. ಫರೀದ್ ಅಹ್ಮದ್ ಆ್ಯಂಬಿಡೆಂಟ್ ಪ್ರಕರಣದ ಪ್ರಮುಖ ಆರೋಪಿ. ತನಿಖೆ ಶುರು ಮಾಡಿದ್ದ ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ಅವರಿಗೆ ಆರೋಪಿ ಫರೀದ್ ಅಹ್ಮದ್ ವಂಚನೆಯ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿದ್ದ. ಹಾಲಿ ಹಾಗೂ ಮಾಜಿ ಸಚಿವರಿಗೆ ಲಂಚ ನೀಡಿರುವುದಾಗಿ ಮಾಹಿತಿ ನೀಡಿದ್ದ. ಅಷ್ಟರಲ್ಲಿ ತನಿಖಾಧಿಕಾರಿಯನ್ನು ಎತ್ತಂಗಡಿ ಮಾಡಲಾಗಿತ್ತು. ತದನಂತರ ಪ್ರಕರಣ ಕುರಿತ ತನಿಖಾಧಿಕಾರಿಯಾಗಿದ್ದ ವೆಂಕಟೇಶ್ ಪ್ರಸನ್ನ ಡಿಜಿ ಐಜಿಪಿಗೆ ಪತ್ರ ಬರೆದಿದ್ದರು. ಪತ್ರದಲ್ಲಿರುವ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಚಳವಳಿ ನಡೆಸಿತ್ತು.

ಆರೋಪಿ ರಾಜಕಾರಣಿಗಳ ಹೆಸರುಗಳನ್ನು ಬಹಿರಂಗಪಡಿಸಿದ್ದಾನೆ. ಹೀಗೆಂದು ಸ್ವತಃ ತನಿಖಾಧಿಕಾರಿಯೇ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೂ ರಾಜಕಾರಣಿಗಳ ಮೇಲೆ ಪೊಲೀಸ್ ಇಲಾಖೆ ಯಾವುದೇ ಕ್ರಮ ಜರುಗಿಸಿಲ್ಲ. ಈ ಹಿನ್ನೆಲೆ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಿ ಎಂದು ರವಿಕೃಷ್ಣಾರೆಡ್ಡಿ ಅರ್ಜಿ ಸಲ್ಲಿಸಿದ್ದರು. ಐಎಂಎ ವಂಚನೆ ಹಾಗೂ ಆ್ಯಂಬಿಡೆಂಟ್ ವಂಚನೆ ಪ್ರಕರಣಗಳು ಏಕ ರೀತಿಯ ವಂಚನೆ ಪ್ರಕರಣಗಳಾಗಿವೆ. ಹೀಗಾಗಿ, ಐಎಂಎ ಬಹುಕೋಟಿ ವಂಚನೆ ಪ್ರಕರಣವನ್ನು ಹೇಗೆ ಸಿಬಿಐಗೆ ವಹಿಸಲಾಯಿತೋ, ಅದೇ ರೀತಿ ಈ ಪ್ರಕರಣವನ್ನೂ ಸಿಬಿಐಗೆ ವಹಿಸಿ ಎಂದು ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದ ಮಂಡನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News