ಅ.20ರವರೆಗೆ ಅಂತರಾಷ್ಟ್ರೀಯ ಆಹಾರೋತ್ಸವ: ಸಾವಿರಾರು ಬಗೆಯ ತಿಂಡಿ, ತಿನಿಸುಗಳ ವೈವಿಧ್ಯತೆಯ ಸಂಗಮ

Update: 2019-10-18 17:09 GMT

ಬೆಂಗಳೂರು, ಅ.18: ಏಷ್ಯಾದಲ್ಲಿಯೇ ಅತಿ ದೊಡ್ಡ ಸಸ್ಯಾಹಾರಿ ಆಹಾರೋತ್ಸವ ಇಂದಿನಿಂದ ಅ.20ರವರೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿದ್ದು, ರಾಜ್ಯ, ಅಂತರ್‌ರಾಜ್ಯ ಹಾಗೂ ವಿದೇಶಿ ತಿನಿಸುಗಳು ಗ್ರಾಹಕರ ರುಚಿಯನ್ನು ತಣಿಸಲು ಸಿದ್ಧಗೊಂಡಿವೆ.

ಮಾಂಕ್ ಸ್ಟುಡಿಯೋ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಬೃಹತ್ ಬೆಂಗಳೂರು ಆಹಾರೋತ್ಸವದಲ್ಲಿ ಸಾವಿರಾರು ಬಗೆಯ ತಿಂಡಿ-ತಿನಿಸುಗಳನ್ನು ಸವಿಯಬಹುದಾಗಿದೆ. ಆಹಾರೋತ್ಸವ ಮೇಳ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ನಡೆಯಲಿದ್ದು, 1 ಸಾವಿರಕ್ಕೂ ಹೆಚ್ಚು ವೈವಿಧ್ಯಮಯ ಆಹಾರಗಳು 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ದೊರೆಯಲಿದೆ ಎಂದು ಮಾಂಕ್ ಸ್ಟುಡಿಯೋಸ್‌ನ ಮುಖ್ಯಸ್ಥ ನವೀನ್ ಸುರೇಶ್ ತಿಳಿಸಿದರು.

ದಾವಣಗೆರೆ ಬೆಣ್ಣೆ ದೋಸೆ, ಮಲೆನಾಡು ತಿಂಡಿ ಮನೆ, ಮೇಲುಕೋಟೆ ಪುಲಿಯೋಗರೆ ಸೇರಿದಂತೆ ಇಟಾಲಿಯನ್, ಅಮೆರಿಕನ್, ಚೈನೀಸ್ ತಿಂಡಿಗಳು, ಬಗೆ ಬಗೆಯ ಐಸ್‌ಕ್ರೀಮ್‌ಗಳು ಗ್ರಾಹಕರನ್ನು ಸೆಳೆಯುತ್ತಿದ್ದು, ವಿವಿಧ ರುಚಿಗಳನ್ನು ಸವಿಯುವವರಿಗೆ ಉತ್ತಮ ಅವಕಾಶವನ್ನು ಕಲ್ಪಿಸಿದೆ.

ಮೇಲುಕೋಟೆ ಪುಲಿಯೋಗರೆಗೆ ಸಾವಿರ ವರ್ಷ ಇತಿಹಾಸವಿದೆ. ಉತ್ತಮ ಪದಾರ್ಥಗಳನ್ನು ಬಳಸಿ ಪುಲಿಯೋಗರೆ ತಯಾರಿಸಿದರೆ ಅದರ ರುಚಿಗೆ ಸಾಟಿಯೇ ಇರುವುದಿಲ್ಲ. ಹೀಗಾಗಿ ಮೇಲುಕೋಟೆ ಪುಲಿಯೋಗರೆಯನ್ನು ಒಂದು ಬಾರಿ ರುಚಿ ನೋಡಿದವರಿಗೆ, ಅದನ್ನು ಬಿಟ್ಟು ಬೇರೆ ಕಡೆ ಹೋಗುವುದಿಲ್ಲವೆಂದು ಮೇಲುಕೋಟೆ ರಮೇಶ್ ತಿಳಿಸುತ್ತಾರೆ. ನಾನು 15ವರ್ಷದಿಂದ ಮೇಲುಕೋಟೆ ಪುಲಿಯೋಗರೆಯನ್ನು ತಯಾರಿಸುತ್ತಿದ್ದೇನೆ. ನೂರಾರು ಕಿಮೀ ದೂರದಿಂದ ನನ್ನಲ್ಲಿಗೆ ಬಂದು ಪುಲಿಯೋಗರೆ ಪೌಂಡರನ್ನು ತೆಗೆದುಕೊಂಡು ಹೋಗುತ್ತಾರೆ. ಹೀಗಾಗಿ ಬೆಂಗಳೂರಿನ ಜನರಿಗೂ ನಮ್ಮ ಪುಲಿಯೋಗರೆಯ ರುಚಿಯನ್ನು ತೋರಿಸಲು ಇಲ್ಲಿ ಸ್ಟಾಲ್ ಹಾಕಿದ್ದೇನೆಂದು ತಿಳಿಸಿದರು.

ಹೀಗೆ ಹತ್ತಾರು ಬಗೆಯ ಬಜ್ಜಿ, ಉಪ್ಪಿನಕಾಯಿ, ಚಿಕ್ಕಿ, ಐಸ್‌ಕ್ರೀಮ್‌ಗಳನ್ನು ಗ್ರಾಹಕರು ಸವಿಯುತ್ತಾ, ರುಚಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದದ್ದು ಸಾಮಾನ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News