ಬೆಂಗಳೂರು: ಶೀಘ್ರದಲ್ಲೇ 12 ಚಾರ್ಜಿಂಗ್ ಪಾಯಿಂಟ್‌ಗಳ ಲೋಕಾರ್ಪಣೆ

Update: 2019-10-18 17:22 GMT

ಬೆಂಗಳೂರು, ಅ.18: ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವ ಸರಕಾರದ ಕಾರ್ಯಕ್ಕೆ ಬೆಸ್ಕಾಂ ಸಾಥ್ ನೀಡಿದ್ದು, ಶೀಘ್ರದಲ್ಲಿಯೇ ನಗರದ 12 ಕೇಂದ್ರಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳು ಸಾರ್ವಜನಿಕ ಸೇವೆಗೆ ಮುಕ್ತವಾಗಲಿವೆ.

ಒಂದು ವರ್ಷದ ಹಿಂದೆ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಪ್ರಾಯೋಗಿಕವಾಗಿ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಆ ಬಳಿಕ ಕೆಇಆರ್‌ಸಿ, ವಿಧಾನಸೌಧ-ವಿಕಾಸಸೌಧ ಆವರಣದಲ್ಲಿ ಸ್ಥಾಪಿಸಿದ್ದ ಘಟಕಗಳು ಉತ್ತಮ ಫಲಿತಾಂಶ ದಾಖಲಿಸಿವೆ. ಇನ್ನಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಕೇಂದ್ರಗಳನ್ನು ಆರಂಭಿಸುವಂತೆ ಎಲೆಕ್ಟ್ರಿಕ್ ವಾಹನ ಬಳಕೆದಾರರು ಸರಕಾರವನ್ನು ಆಗ್ರಹಿಸಿದ್ದರು. ಅದೀಗ ಸಾಕಾರವಾಗುವ ಹಂತ ತಲುಪಿದೆ. ಪ್ರಸ್ತುತ ಕಾರ್ಯಾಚರಿಸುತ್ತಿರುವ ಹತ್ತು ಘಟಕಗಳ ಜತೆಗೆ ಹೊಸದಾಗಿ 12 ಕೇಂದ್ರಗಳು ಪ್ರಮುಖ ಸ್ಥಳಗಳಲ್ಲೆ ಕಾರ್ಯಾಚರಿಸಲಿವೆ. ಪ್ರತಿ ಕೇಂದ್ರದಲ್ಲಿ ಎರಡು ಘಟಕಗಳಿರಲಿದ್ದು, ಒಮ್ಮೆಗೆ ನಾಲ್ಕು ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಸಿಗಲಿದೆ. ಬಹುತೇಕ ಕೇಂದ್ರಗಳು ಸರಕಾರಿ ಜಾಗದಲ್ಲೆ ಇದ್ದು, ಕಾರ್ಯಾಚರಣೆಗೆ ಪಾಲಿಕೆಯಿಂದ ಒಪ್ಪಿಗೆ ಪಡೆಯಲಾಗಿದೆ. ಇವುಗಳನ್ನು ಶೀಘ್ರದಲ್ಲೆ ಸಿಎಂ ಉದ್ಘಾಟಿಸಲಿದ್ದಾರೆ. 

3 ವರ್ಷದ ಗುತ್ತಿಗೆ: ಹೊಸದಾಗಿ ಆರಂಭವಾಗುವ ಚಾರ್ಜಿಂಗ್ ಕೇಂದ್ರಗಳ ನಿರ್ವಹಣೆ ಗುತ್ತಿಗೆಯನ್ನು ದಿಲ್ಲಿ ಮೂಲದ ಡೆಲ್ಟಾ ಕಂಪನಿಗೆ ವಹಿಸಲಾಗಿದೆ. ಕಂಪೆನಿಯೇ ಆಯಾ ಕೇಂದ್ರಗಳಿಗೆ ಬರುವ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಿದೆ. ಇದಕ್ಕಾಗಿ ಪ್ರತಿ ಕೇಂದ್ರದಲ್ಲಿ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಿದೆ. ಆರಂಭದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ಸೇವೆ ಸಿಗಲಿದ್ದು, ಮುಂದಿನ ದಿನಗಳಲ್ಲಿ 24 ಗಂಟೆ ಸೇವೆ ನೀಡಲು ಉದ್ದೇಶಿಸಲಾಗಿದೆ.

ಚಾರ್ಜಿಂಗ್‌ಗೆ ಬಳಸುವ ವಿದ್ಯುತ್‌ಗೆ ಕೆಇಆರ್‌ಸಿ ಈಗಾಗಲೇ ಪ್ರತಿ ಯೂನಿಟ್‌ಗೆ 4.85 ರೂ. ದರ ವಿಧಿಸಿದೆ. ಇದನ್ನಾಧರಿಸಿ ವಾಹನಗಳ ಚಾರ್ಜಿಂಗ್ ಬಳಕೆಯಾಗುವ ಪ್ರಮಾಣಕ್ಕೆ ಶುಲ್ಕ ವಿಧಿಸಲಾಗುತ್ತದೆ. ಈ ಸಂಬಂಧ ಬೆಸ್ಕಾಂನಿಂದ ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಗೆ ಪತ್ರ ರವಾನಿಸಿದ್ದು, ಶೀಘ್ರದಲ್ಲೆ ಸರಕಾರದ ಒಪ್ಪಿಗೆ ದೊರೆತು ಅಧಿಕೃತ ಆದೇಶ ಹೊರ ಬೀಳಲಿದೆ.

ಮತ್ತಷ್ಟು ಘಟಕಗಳ ಆರಂಭ: ಉದ್ಘಾಟನೆಯಾಗಲಿರುವ 12 ಕೇಂದ್ರಗಳನ್ನು ಹೊರತುಪಡಿಸಿ ಮುಂದಿನ ನವೆಂಬರ್ ತಿಂಗಳಾಂತ್ಯದೊಳಗೆ ಮತ್ತೆ 80 ಕೇಂದ್ರಗಳು ಆರಂಭವಾಗಲಿವೆ. ಇವುಗಳು ಕೆಎಚ್‌ಬಿ, ಬಿಡಿಎ, ಬಿಎಂಟಿಸಿ(ಟಿಟಿಎಂಸಿ), ಮೆಟ್ರೊ ನಿಲ್ದಾಣ, ಕೆಐಎಡಿಬಿ, ಆರ್‌ಟಿಒ ಹಾಗೂ ಬೆಸ್ಕಾಂ ಉಪ ಕೇಂದ್ರಗಳಲ್ಲಿ ಸ್ಥಾಪನೆಯಾಗಲಿವೆ.

ಎಲ್ಲೆಲ್ಲಿ ಘಟಕ ಸ್ಥಾಪನೆ? ಇಂದಿರಾನಗರ, ಮರುಗೇಶಪಾಳ್ಯ, ಮಹದೇವಪುರ, ಕತ್ರಿಗುಪ್ಪೆ, ಬಿಟಿಎಂ ಲೇಔಟ್, ಬಾಣಸವಾಡಿ, ಎಚ್‌ಎಸ್‌ಆರ್ ಲೇಔಟ್, ಪೀಣ್ಯ, ಮೈಸೂರು ರಸ್ತೆ(ಕವಿಕಾ), ಯಲಹಂಕ ಹಾಗೂ ಬೆಸ್ಕಾಂ ಕೇಂದ್ರ ಕಚೇರಿ ಬಳಿ ಸ್ಥಾಪನೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News