ತಲಕಾವೇರಿ ಅಭಿವೃದ್ಧಿಗೆ ಬಿಬಿಎಂಪಿಯಿಂದ ಒಂದು ಕೋಟಿ ರೂ. ಅನುದಾನ

Update: 2019-10-18 18:00 GMT

ಬೆಂಗಳೂರು, ಅ.18: ತಲಕಾವೇರಿಯ ಸಮಗ್ರ ಅಭಿವೃದ್ಧಿಗಾಗಿ ಬಿಬಿಎಂಪಿ ವತಿಯಿಂದ ಒಂದು ಕೋಟಿ ರೂ. ಗಳ ಅನುದಾನವನ್ನು ಮೇಯರ್ ಗೌತಮ್ ಕುಮಾರ್ ಅವರು ಪ್ರಕಟಿಸಿದ್ದಾರೆ.

ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಪೂಜೆ ಸಲ್ಲಿಸಿದ್ದೇನೆ. ಇಲ್ಲಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಿಬಿಎಂಪಿಯಿಂದ ನೆರವು ನೀಡುತ್ತಿರುವುದಾಗಿ ಮೇಯರ್ ಇಂದಿಲ್ಲಿ ಹೇಳಿದ್ದಾರೆ.

ಬೆಂಗಳೂರು ನಗರಕ್ಕೆ ನೂರಾರು ವರ್ಷಗಳಿಂದ ಕಾವೇರಿ ನೀರು ಹರಿದುಬರುತ್ತಿದೆ. ಒಂದು ವೇಳೆ ಕಾವೇರಿ ನೀರು ಇಲ್ಲದಿದ್ದರೆ, ಬೆಂಗಳೂರು ನಗರದ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗಿತ್ತು. ಅದಕ್ಕಾಗಿ ತಲಕಾವೇರಿಯ ಸಮಗ್ರ ಅಭಿವೃದ್ಧಿಗೆ ಹಣಕಾಸು ನೆರವು ನೀಡಿ ಚಿರಋಣಿಯಾಗಿರುವುದಾಗಿ ಅವರು ತಿಳಿಸಿದ್ದಾರೆ.

ತಲಕಾವೇರಿಯಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲು ನೀಲಿನಕ್ಷೆ ಸಿದ್ಧಪಡಿಸಲು ಈಗಾಗಲೇ ಬಿಬಿಎಂಪಿ ಉಪಆಯುಕ್ತರೊಬ್ಬರಿಗೆ ಸೂಚಿಸಲಾಗಿದೆ. ಅವರು ತಲಕಾವೇರಿಯಲ್ಲಿ ಅಗತ್ಯವಾಗಿ ಬೇಕಾದ ಸೌಕರ್ಯಗಳನ್ನು ಗುರುತಿಸಿ ಅಂದಾಜು ಪಟ್ಟಿ ಸಿದ್ಧಪಡಿಸಲಿದ್ದಾರೆ ಎಂದು ಗೌತಮ್ ಕುಮಾರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿರುವ ಕೋಟ್ಯಂತರ ಜನರು, ಕಾವೇರಿ ನೀರು ಕುಡಿಯುತ್ತಿದ್ದಾರೆ. ಆ ಕಾವೇರಿ ತಾಯಿಗೆ ಜನ ನಮನ ಸಲ್ಲಿಸಬೇಕಿದೆ. ಈ ರೂಪದಲ್ಲಾದರೂ ಬಿಬಿಎಂಪಿ ಕೃತಜ್ಞತೆ ಸಲ್ಲಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಮೇಯರ್ ಗೌತಮ್ ಕುಮಾರ್ ಜತೆಗೆ ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ಸೋಮಣ್ಣ, ಉಪಮೇಯರ್ ರಾಮಮೋಹನ ರಾಜು ಸೇರಿದಂತೆ ಅನೇಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News