ಕುವೆಂಪುರ ಕಾವ್ಯ ಸೃಷ್ಟಿ ಜಗತ್ತಿನ ದೃಷ್ಟಿಯನ್ನು ಅವಲೋಕಿಸುತ್ತದೆ: ಪ್ರೊ.ಗಾಯತ್ರಿ ಸುಧೀರ್

Update: 2019-10-18 18:26 GMT

ಬೆಂಗಳೂರು, ಅ.18: ರಾಷ್ಟ್ರಕವಿ ಕುವೆಂಪುರವರ ಕಾವ್ಯ ಸೃಷ್ಟಿ ಮತ್ತು ವಿಶ್ವ ಮಾನವತ್ವ ಇಡೀ ಲೋಕದ ದೃಷ್ಟಿಯನ್ನು ಅವಲೋಕಿಸುತ್ತದೆ ಎಂದು ದಿ ಅಕ್ಸ್‌ಫರ್ಡ್ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಗಾಯತ್ರಿ ಸುಧೀರ್ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ಆಕ್ಸ್‌ಫರ್ಡ್ ಕಾಲೇಜಿನಲ್ಲಿ ರಾಷ್ಟ್ರಕವಿ ಕುವೆಂಪುರವರ ಬರಹ, ಬದುಕು ಕುರಿತ ಚಿತ್ರ ಪ್ರದರ್ಶನ ಹಾಗೂ ಕಾವ್ಯಾನಿಕೇತನ ಎಂಬ ವಿದ್ಯಾರ್ಥಿ ಕೈ ಬರಹ ಗೋಡೆ ಪತ್ರಿಕೆಯ ಎರಡನೇ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕುವೆಂಪುರವರ ಸಾಹಿತ್ಯವನ್ನು ಓದುತ್ತಾ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವುದರ ಕಡೆಗೆ ಸಾಗಬೇಕೆಂದು ಆಶಿಸಿದರು.

ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಕವಿ ಚಾಂದ್‌ಪಾಷ ಮಾತನಾಡಿ, ಸಾಹಿತ್ಯ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳ ಸಕ್ರಿಯತೆ ಮತ್ತು ಪಾಲ್ಗೊಳ್ಳುವಿಕೆ ನೋಡಿದರೆ, ಕುವೆಂಪುರವರ ತಾತ್ವಿಕತೆ ದಿ ಆಕ್ಸ್‌ಫರ್ಡ್ ಕಾಲೇಜಿನಲ್ಲಿ ನೆಲೆಯೂರಿದೆ ಎಂದೆನಿಸುತ್ತಿದೆ. ಇದು ಹೀಗೆ ಸೃಜನಾತ್ಮಕವಾಗಿ ಮುಂದುವರೆಯಲಿ ಎಂದು ತಿಳಿಸಿದರು. ಈ ವೇಳೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಮರಿಸ್ವಾಮಿ, ಸಹ ಪ್ರಾಧ್ಯಾಪಕಿ ಭವ್ಯ ಪ್ರಕಾಶ್ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಕುವೆಂಪು ರವರ ಬರಹ, ಬದುಕು ಕುರಿತ ಚಿತ್ರ ಪ್ರದರ್ಶನವನ್ನು ಯಶಸ್ವಿಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News